ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಿರ್ದಿಷ್ಟ ಬ್ರ್ಯಾಂಡ್ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ‘ಜೀನೋಟಾಕ್ಸಿಕ್’ ಕೂಡಿದೆ ಎಂಬ ವೀಡಿಯೋ ಹರಿದಾಡಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಖಾಸಗಿ ಲ್ಯಾಬ್ಗಳಲ್ಲಿ ಮೊಟ್ಟೆ ಪರೀಕ್ಷಿಸಲು ಆದೇಶಿಸಿದೆ.
ಖಾಸಗಿ ಲ್ಯಾಬ್ನಲ್ಲಿ ಟೆಸ್ಟ್ಗೆ ಸೂಚಿಸಿರುವ ಸರ್ಕಾರ ಒಂದು ವಾರದಲ್ಲಿ ವರದಿ ನೀಡಲು ಆದೇಶಿಸಿದೆ. ಸರ್ಕಾರಿ ಲ್ಯಾಬ್ನಲ್ಲಿ ಹೆಚ್ಚಿನ ತಂತ್ರಜ್ಞಾನ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಲು ಆದೇಶಿಸಿದೆ.
13 ಜಿಲ್ಲೆಗಳಲ್ಲಿ ಮೊಟ್ಟೆ ಸಂಗ್ರಹ
ಕ್ಯಾನ್ಸರ್ ಕಾರಕ ವದಂತಿ ಬೆನ್ನಲ್ಲೇ ರಾಜ್ಯದ 13 ಜಿಲ್ಲೆಗಳಲ್ಲಿ ನೂರಾರು ಕಡೆ ವಿವಿಧ ಮಾದರಿಯ ಮೊಟ್ಟೆ ಸಂಗ್ರಹಿಸಲಾಗಿದೆ. ಬೆಂಗಳೂರು ಬಿಬಿಎಂಪಿ ವಲಯಗಳು, ಪೂರ್ವ ವಲಯ, ದಕ್ಷಿಣ ವಲಯ, ಪಶ್ವಿಮ ವಲಯ, ಉತ್ತರ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಾಗಲಕೋಟೆ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ರಾಯಚೂರು ಜಿಲ್ಲೆಗಳಲ್ಲಿ ಮೊಟ್ಟೆ ಮಾದರಿಗಳನ್ನ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿದೆ.
ಏನಿದು ಆತಂಕ?
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಬ್ರಾಂಡ್ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ‘ಜೀನೋಟಾಕ್ಸಿಕ್’ ಕೂಡಿದೆ ಎಂಬ ವೀಡಿಯೋ ಹರಿದಾಡುತ್ತಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಮೊಟ್ಟೆಗಳಲ್ಲಿ ನಿಷೇಧಿತ ಕ್ಯಾನ್ಸರ್ಕಾರಕ ಅಂಶವಿದೆ ಎಂಬ ವದಂತಿಗಳು ಹಬ್ಬಿರುವ ಪರಿಣಾಮವಾಗಿ ಶಾಲಾ ಮಕ್ಕಳಿಗೆ ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಬೆನ್ನಲ್ಲೇ ಆರೋಗ್ಯ ಸಚಿವರು ಆತಂಕ ಪಡಬೇಕಿಲ್ಲ ಎಂದು ಅಭಯ ನೀಡಿದ್ದರು. ಕಳೆದ ವರ್ಷ 147 ಮಾದರಿ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಒಂದು ಫೇಲ್ ಆಗಿತ್ತು, ಬೇರೆ ಎಲ್ಲಾ ಸ್ಯಾಂಪಲ್ ಉತ್ತಮವಾಗಿತ್ತು. ಯಾವುದೇ ಆತಂಕ ಬೇಡ ಅಂತ ಹೇಳಿದ್ದರು.
