ಮೈಸೂರು: ಮರ್ಯಾದೆ ಕೊಡದ ಹೆಂಡತಿಯನ್ನು ಕೊಲ್ಲಲು ಪತಿಯೆ ತನ್ನ ಸಹಾಯಕರಿಗೆ 5 ಲಕ್ಷ ರೂ. ಸುಪಾರಿ ಕೊಟ್ಟ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಸುಪಾರಿ ಪಡೆದವರು ಮಹಿಳೆಯ ಹತ್ಯೆಗೆ ಯತ್ನಿಸಿದ್ದು ಆಕೆ ಪಾರಾಗಿದ್ದಾಳೆ.
ಬಿಎಂಶ್ರೀ ನಗರದ ನಾಗರತ್ನ (45) ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮಹಿಳೆ. ಮಹಿಳೆಯ ಪತಿ ಮಹೇಶ್ ಆಕೆಯ ಹತ್ಯೆಗೆ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ. ಆತನ ಸ್ನೇಹಿತರಾದ ಭಾಸ್ಕರ್ ಹಾಗೂ ಅಭಿಷೇಕ್ ಆಕೆಯ ಮೇಲೆ ಹಲ್ಲೆ ನಡೆಸಿ, ಗ್ಯಾಸ್ ಸೋರಿಕೆ ಮಾಡಿ ಅಗ್ನಿ ಅವಘಡದಂತೆ ಬಿಂಬಿಸಲು ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಗರತ್ನ ಒಬ್ಬರೇ ಇದ್ದ ವೇಳೆ ಭಾಸ್ಕರ್ ಹಾಗೂ ಅಭಿಷೇಕ್ ಸುತ್ತಿಗೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ನಂತರ ಮನೆಗೆ ಬೆಂಕಿ ಹಾಕಿ, ಸಿಲಿಂಡರ್ ಸೋರಿಕೆ ಮಾಡಿದ್ದಾರೆ. ಈ ವೇಳೆ ಮನೆಯ ಕೆಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಗಾಯಗೊಂಡ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾನಿಪುರಿ ವ್ಯಾಪಾರ ಮಾಡ್ತಿದ್ದ ಮಹೇಶ್ ತನ್ನ ಸಂಪಾದನೆಯ ಹಣವನ್ನು ಹೆಂಡತಿ ಬಡ್ಡಿಗೆ ಬಿಡುತ್ತಿದ್ದಿದ್ದಕ್ಕೆ ಅಸಮಾಧಾನವಿತ್ತು. ಅಲ್ಲದೇ ಗಂಡನಿಗೆ ಕಿಂಚಿತ್ತು ಮರ್ಯಾದೆ ಕೊಡದ ಹಿನ್ನಲೆಯಲ್ಲಿ ಪತ್ನಿ ಕೊಲೆಗೆ ತಾನೇ ಸಂಚು ಮಾಡಿದ್ದ. ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡ್ತಿ ಕೊಲೆ ಮಾಡಿ ಎಂದು ಹೇಳಿದ್ದ. ಅಲ್ಲದೇ ಘಟನೆ ವೇಳೆ ಹತ್ತಿರದಲ್ಲೇ ನಿಂತು ಹೆಂಡತಿ ಸಾಯೋದನ್ನೇ ನೋಡಲು ಕಾಯುತ್ತಿದ್ದ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.
ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
