ನವದೆಹಲಿ: ಎಐ ಸೃಷ್ಟಿದ ಫೋಟೋ, ವಿಡಿಯೋಗಳು ಥೇಟ್ ನೈಜ ವ್ಯಕ್ತಿ ಮತ್ತು ಸ್ಥಳದ್ದೇ ಎನಿಸುವಂತಿರುತ್ತವೆ. ಯಾವುದು ಅಸಲಿ, ಯಾವುದು ಕೃತಕ ಎಂದು ಮೇಲ್ನೋಟಕ್ಕೆ ಕಂಡು ಹಿಡಿಯುವುದು ಕಷ್ಟ. ದುರುಳರು ಈ ಎಐ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ರೂಪಿಸಿದೆ. ಡೀಪ್ಫೇಕ್ ವಿಡಿಯೋ, ಸಿಂಥೆಟಿಕ್ ಆಡಿಯೋ, ತಿರುಚಿದ ದೃಶ್ಯಗಳು ಇತ್ಯಾದಿ ಎಐ ಸೃಷ್ಟಿದ ಕಂಟೆಂಟ್ ಅನ್ನು ಐಟಿ ನಿಯಮಗಳಡಿ ತರಲಾಗಿದೆ. ಫೆಬ್ರುವರಿ 20ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತವೆ.
ಎಐ ಕಂಟೆಂಟ್ ಎಂದು ನೋಡಿದ ಕೂಡಲೇ ಗೊತ್ತಾಗಬೇಕು…
ಫೇಸ್ಬುಕ್ ಇತ್ಯಾದಿ ಪ್ಲಾಟ್ಫಾರ್ಮ್ಗಳು ತಮ್ಮಲ್ಲಿ ಅಪ್ಲೋಡ್ ಆಗುವ ಕಂಟೆಂಟ್ಗಳು ಸಿಂಥೆಟಿಕ್ ಆಗಿದ್ದರೆ ಅದು ಗೊತ್ತಾಗುವ ರೀತಿಯಲ್ಲಿ ಲೇಬಲ್ ಆಗಿರಬೇಕು. ಮೆಟಾಡಾಟಾ ಮತ್ತು ಯೂನಿಕ್ ಐಡೆಂಟಿಫೈರ್ಗಳನ್ನು ಎಂಬೆಡ್ ಮಾಡಬೇಕು. ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾ ಮತ್ತು ವೆಬ್ಸೈಟ್ಗಳಲ್ಲಿ ಸಿಂಥೆಟಿಕ್ ಕಂಟೆಂಟ್ ಅಪ್ಲೋಡ್ ಆಗಿದ್ದರೆ, ಅದು ನೋಡುಗರಿಗೆ ಸ್ಪಷ್ಟವಾಗಿ ಗೊತ್ತಾಗುವಂತಿರಬೇಕು ಎಂಬುದು ಆಶಯ.
ಸಿಂಥೆಟಿಕ್ ಅಥವಾ ಎಐ ಜನರೇಟೆಡ್ ಕಂಟೆಂಟ್ ಯಾವುವು?
ನೈಜವೆನಿಸುವ ರೀತಿಯಲ್ಲಿ ಕಂಪ್ಯೂಟರ್ ಬಳಸಿ ಯಾವುದೇ ಧ್ವನಿ ಅಥವಾ ದೃಶ್ಯವನ್ನು ಸೃಷ್ಟಿಸಿದ್ದರೆ ಅಥವಾ ಬದಲಾಯಿಸಿದ್ದರೆ ಅಂಥದ್ದನ್ನು ಸಿಂಥೆಟಿಕ್ ಆಗಿ ಸೃಷ್ಟಿಸಿದ ಮಾಹಿತಿ ಎಂದು ವ್ಯಾಖ್ಯಾನಿಸಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಫೋಟೋ ಅಥವಾ ವಿಡಿಯೋದಲ್ಲಿ ಮಾಡಲಾಗುವ ಎಲ್ಲಾ ಬದಲಾವಣೆಗಳೂ ಇದಕ್ಕೆ ಒಳಪಡುವುದಿಲ್ಲ. ಉದಾಹರಣೆಗೆ, ಫೋಟೋ ಅಥವಾ ವಿಡಿಯೋದಲ್ಲಿ ಕಲರ್ ಕರೆಕ್ಷನ್, ಬ್ರೈಟ್ನೆಸ್ ಹೊಂದಾಣಿಕೆ, ನಾಯ್ಸ್ ಕರೆಕ್ಷನ್ ಇತ್ಯಾದಿ ಮಾಡಿದರೆ ಸಮಸ್ಯೆ ಇರುವುದಿಲ್ಲ.
ಬಳಕೆದಾರರಿಗೆ ಜವಾಬ್ದಾರಿ…
ಸೋಷಿಯಲ್ ಮೀಡಿಯಾ ಬಳಕೆದಾರರು ತಾವು ಅಪ್ಲೋಡ್ ಮಾಡುವ ಕಂಟೆಂಟ್ ಎಐ ಸೃಷ್ಟಿತವಾಗಿದ್ದರೆ ಅದನ್ನು ನಮೂದಿಸಬೇಕು. ಇವರು ಕಂಟೆಂಟ್ ಅನ್ನು ಅಪ್ಲೋಡ್ ಮಾಡುವ ಮುನ್ನ ಅದು ಎಐ ಜನರೇಟೆಡ್ ಹೌದಾ ಅಲ್ಲವಾ ಎಂಬುದನ್ನು ಪ್ಲಾಟ್ಫಾರ್ಮ್ಗಳು ಕೇಳಬೇಕು. ಫೇಸ್ಬುಕ್ನಲ್ಲಿ ಯಾರಾದರೂ ಫೋಟೋ ಅಪ್ಲೋಡ್ ಮಾಡುವಾಗ ಇದನ್ನು ಘೋಷಿಸಬೇಕು.
ಇಷ್ಟು ಮಾತ್ರವಲ್ಲ, ಯಾರಾದರೂ ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಎಐ ಸೃಷ್ಟಿತ ಕಂಟೆಂಟ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಾಕುವ ಸಾಧ್ಯತೆ ಇರುವುದರಿಂದ, ಆಟೊಮೇಟ್ ಟೂಲ್ಗಳ ಮೂಲಕ ಅವುಗಳ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎನ್ನುತ್ತದೆ ನಿಯಮ.
ಪ್ಲಾಟ್ಫಾರ್ಮ್ಗಳಿಗೆ ಕಡಿಮೆ ಸಮಯಾವಕಾಶ…
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ನಿರ್ದಿಷ್ಟ ಕಂಟೆಂಟ್ ಅನ್ನು ತೆಗೆದುಹಾಕಲು ಕಾನೂನಿನ ಆದೇಶ ಬಂದರೆ ಅದನ್ನು ಪಾಲಿಸಲು 36 ಗಂಟೆ ಇದ್ದ ಕಾಲಾವಕಾಶದ ಅವಧಿಯನ್ನು 3 ಗಂಟೆಗೆ ಇಳಿಸಲಾಗಿದೆ. 15 ದಿನಗಳಿದ್ದ ಕಾಲಾವಕಾಶವನ್ನು ಏಳು ದಿನಕ್ಕೆ ಇಳಿಸಲಾಗಿದೆ. 24 ಗಂಟೆ ಇದ್ದ ಡೆಡ್ಲೈನ್ ಅನ್ನು 12 ಗಂಟೆಗೆ ಇಳಿಸಲಾಗಿದೆ.
ಇವು ಕೂಡ ಕ್ರಿಮಿನಲ್ ಅಪರಾಧಗಳೇ…
ಮಕ್ಕಳ ಲೈಂಗಿಕ ದುರ್ಬಳಕೆಯ ಸರಕುಗಳು, ಅಶ್ಲೀಲ ಕಂಟೆಂಟ್, ನಕಲಿ ಎಲೆಕ್ಟ್ರಾನಿಕ್ ರೆಕಾರ್ಡ್ಗಳು, ನೈಜ ವ್ಯಕ್ತಿಯನ್ನು ಹೋಲುವ ಡೀಪ್ಫೇಕ್ಗಳು ಮತ್ತು ನಕಲಿ ಧ್ವನಿಗಳನ್ನು ಸೃಷ್ಟಿಸಿದರೆ ಅದು ಭಾರತೀಯ ನ್ಯಾಯ ಸಂಹಿತೆ, ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧವಾಗುತ್ತದೆ ಎಂದು ಹೊಸ ಐಟಿ ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
