ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಯತೀಂದ್ರ ಹೇಳಿಕೆ, ಡಿಕೆಶಿ ದೆಹಲಿ ಪ್ರವಾಸದ ಬಳಿಕ ಕುರ್ಚಿ ಬದಲಾವಣೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈ ಬೆನ್ನಲ್ಲೇ ಶಾಸಕರ ಫಾರಿನ್ ಟೂರ್ ಸಂಚಲನ ಸೃಷ್ಟಿಸಿದೆ. ಹೈಕಮಾಂಡ್ ಹೇಳಿಕೆಗೂ ಡೋಂಟ್ ಕೇರ್ ಎಂದಿರುವ ಕಾಂಗ್ರೆಸ್ ಶಾಸಕರು ವಿದೇಶಿ ಪ್ರವಾಸಕ್ಕೆ ಮುಂದಾಗಿದ್ದಾರೆ.
ಸುಮಾರು 27 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ವಿದೇಶ ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಫಾರಿನ್ ಟ್ರಿಪ್ ಟೀಂನಲ್ಲಿ ಯಾರಿದ್ದಾರೆ?
ಶಾಸಕರಾದ ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಬಿ.ಎಂ ನಾಗರಾಜು, ಯಶವಂತರಾಯಗೌಡ ಪಾಟೀಲ್, ಅನಿಲ್ ಚಿಕ್ಕಮಾಧು, ಜೆ.ಟಿ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬನವನಗೌಡ ದದ್ದಲ್, ಎ.ಆರ್ ಕೃಷ್ಣಮೂರ್ತಿ, ತುರವೀಹಾಳ್, ಬಿ.ಬಿ ಚಿಮ್ಮನಕಟ್ಟಿ, ಬಿ.ಆರ್ ಪಾಟೀಲ್, ರಘು ಮೂರ್ತಿ ಹಾಗೂ ಪರಿಷತ್ ಸದಸ್ಯ ಶಿವಕುಮಾರ್ ಸೇರಿ ಹಲವರು ವಿದೇಶಿ ಪ್ರವಾಸದ ತಂಡದಲ್ಲಿದ್ದಾರೆ.
ಇದೇ ಫೆಬ್ರವರಿ 17 ರಂದು (ನಾಳೆ) ವಿದೇಶಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೊದಲು ಪ್ರವಾಸ ಕೈಗೊಳ್ಳುವ ಶಾಸಕರ ಸಂಖ್ಯೆ 35 ಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ 20ಕ್ಕೆ ಇಳಿದಿದೆ, 6-7 ಪರಿಷತ್ ಸದಸ್ಯರು ಪ್ರವಾಸಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
