Ad image

ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್ !

Team SanjeMugilu
1 Min Read

ಬೆಂಗಳೂರು: ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂಡಿ ನವಾಜ್ ತಮ್ಮ ವಿರುದ್ಧ ಆನ್‌ಲೈನ್‌ನಲ್ಲಿ ಪ್ರಕಟವಾಗಿರುವ ಮಾನಹಾನಿಕರ ಬರಹಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಕೊಲಂಬೋ ಟೆಲಿಗ್ರಾಫ್ ಹಾಗೂ ಲಂಕಾ ಇ-ನ್ಯೂಸ್‌ಗೆ ನೋಟಿಸ್ ಜಾರಿ ಮಾಡಿದೆ.

ತನ್ನ ಅಹವಾಲಿಗೆ ತಾನೇ ತೀರ್ಪು ನೀಡಬಾರದೆಂಬ ತತ್ವ
ಅರ್ಜಿಯಲ್ಲಿ, 2015 ಮತ್ತು 2020ರಲ್ಲಿ ತಮ್ಮ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಮಾನಹಾನಿ ಸುದ್ದಿಗಳನ್ನು ಪ್ರಕಟಿಸಲಾಗಿದೆ ಎಂದು ನವಾಜ್ ಆರೋಪಿಸಿದ್ದಾರೆ. ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಕಾರಣ ಅಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಉದ್ಭವಿಸಬಹುದು ಎಂದು ಅವರು ತಿಳಿಸಿದ್ದಾರೆ. ತನ್ನ ಅಹವಾಲಿಗೆ ತಾನೇ ತೀರ್ಪು ನೀಡಬಾರದೆಂಬ ತತ್ವದ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಇನ್ನು ಆನ್‌ಲೈನ್ ಸುದ್ದಿ ತಾಣಗಳಲ್ಲಿ ತಮ್ಮ ವಿರುದ್ಧ ದುರುದ್ದೇಶಪೂರಿತವಾಗಿ ಸುದ್ದಿಗಳನ್ನು ಹಂಚಲಾಗಿದೆ ಎಂದು ಹೇಳಿರುವ ಅವರು, ಶ್ರೀಲಂಕಾ ಕೋರ್ಟ್ ಆಫ್ ಅಪೀಲ್‌ನ ಮುಖ್ಯಸ್ಥರಾಗಿದ್ದಾಗ ನೀಡಿದ ಕಾನೂನು ಅಭಿಪ್ರಾಯವನ್ನು ತಪ್ಪಾಗಿ ಉಲ್ಲೇಖಿಸಿ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಭಾರತದ ಸಂವಿಧಾನವು ಘನತೆಯಿಂದ ಬದುಕುವ ಹಕ್ಕನ್ನು ವಿದೇಶೀಯರಿಗೂ ವಿಸ್ತರಿಸಿರುವುದರಿಂದ ಈ ಅರ್ಜಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ನೋಟಿಸ್ ನೀಡಿದರು ಮಾಹಿತಿ ತೆಗೆದು ಹಾಕದ ಗೂಗಲ್!
ಗೂಗಲ್‌ಗೆ ಈ ಕುರಿತು ನೋಟಿಸ್ ನೀಡಿದ್ದರೂ ಸಹ ಸಂಬಂಧಿತ ಸುದ್ದಿಗಳನ್ನು ಆನ್‌ಲೈನ್‌ನಿಂದ ತೆಗೆದುಹಾಕಲಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹೀಗಾಗಿ ಅವಹೇಳನಕಾರಿ ಹಾಗೂ ಮಾನಹಾನಿಕರ ವಿಷಯಗಳನ್ನು ತಕ್ಷಣವೇ ತೆರವುಗೊಳಿಸುವಂತೆ ನಿರ್ದೇಶಿಸಬೇಕೆಂದು ನ್ಯಾಯಾಲಯವನ್ನು ಕೋರಲಾಗಿದೆ.

Share This Article