ಬೆಂಗಳೂರು: ಸಿಲಿಕಾನ್ ಸಿಟಿಯ ಗುಂಡಿ ಬಿದ್ದ ರಸ್ತೆಗಳು ಮತ್ತು ಹದಗೆಡುತ್ತಿರುವ ಮೂಲಸೌಕರ್ಯಗಳ ಕುರಿತು ಖ್ಯಾತ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ನಗರದ ಅವ್ಯವಸ್ಥೆಯ ಫೋಟೋ ಹಂಚಿಕೊಂಡಿರುವ ಅವರು, ಜಿಬಿಎ ರಸ್ತೆ ದುರಸ್ತಿ ಕಾರ್ಯವು “ಅತ್ಯಂತ ಪ್ರಾಚೀನ ಮತ್ತು ಶೋಚನೀಯ” ಎಂದು ಕಿಡಿಕಾರಿದ್ದಾರೆ.
ಐಟಿ ವಲಯದ ಆತಂಕ ಮತ್ತು ವಲಸೆಯ ಭೀತಿ
ಬ್ಲ್ಯಾಕ್‌ಬಕ್ ಸಿಇಒ ಬೆಂಗಳೂರನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಪೈ ಅವರು ವಾಗ್ದಾಳಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವದ ಶ್ರೇಷ್ಠ ಕಂಪನಿಗಳಿರುವ, ಸುಮಾರು ಎಂಟು ಲಕ್ಷ ಜನರು ಕೆಲಸ ಮಾಡುವ ಪ್ರಮುಖ ರಸ್ತೆಗಳನ್ನೇ ದುರಸ್ತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ಮತ್ತು ಉದ್ಯಮಿಗಳು ನಗರದ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದು, ಐಟಿ ಕಂಪನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸಂಭವವಿದೆ ಎಂದು ಅವರು ಎಚ್ಚರಿಸಿದ್ದಾರೆ.
ವ್ಯವಸ್ಥೆಯ ವೈಫಲ್ಯ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಹತ್ತಾರು ಸಲಹೆಗಳನ್ನು ನೀಡಿದ್ದರೂ ಯಾವುದೇ ಸುಧಾರಣೆ ತಂದಿಲ್ಲ ಎಂದು ಪೈ ದೂರಿದ್ದಾರೆ. ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗುತ್ತಿಲ್ಲ ಮತ್ತು ಪ್ರತಿ ಹಂತದಲ್ಲೂ ದೊಡ್ಡ ಮಟ್ಟದ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಗುಣಮಟ್ಟದ ಕೆಲಸಗಳು ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳ ವಿಳಂಬವನ್ನು ಟೀಕಿಸಿದ ಅವರು, ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಯೋಜನೆಗಳಲ್ಲಿ ಸ್ಥಿರತೆ ಇಲ್ಲದಂತಾಗಿದೆ ಎಂದಿದ್ದಾರೆ.
ಸಾರ್ವಜನಿಕರ ಆಕ್ರೋಶ
ಮೋಹನ್‌ದಾಸ್ ಪೈ ಅವರ ಪೋಸ್ಟ್‌ಗೆ ಸಾವಿರಾರು ನಾಗರಿಕರು ಬೆಂಬಲ ಸೂಚಿಸಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದು ನಿಜಕ್ಕೂ ಭಾರತದ ಸಿಲಿಕಾನ್ ವ್ಯಾಲಿಯೇ? ಇಲ್ಲಿ ರಸ್ತೆಗಳೇ ಇಲ್ಲ, ಕೇವಲ ತೇಪೆ ಹಚ್ಚಿದ ಗುಂಡಿಗಳಿವೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ. ಗುಣಮಟ್ಟದ ತಪಾಸಣೆ ನಡೆಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ಕಾರದ ಮುಂದಿರುವ ಸವಾಲು
ಸರ್ಕಾರಿ ಶಾಲೆಗಳ ಕುಸಿತ, ಉನ್ನತ ಶಿಕ್ಷಣದಲ್ಲಿನ ಖಾಲಿ ಹುದ್ದೆಗಳು ಮತ್ತು ಮೂಲಸೌಕರ್ಯದ ಕೊರತೆಯನ್ನು ನೀಗಿಸದಿದ್ದರೆ, ನಗರದ ಉದ್ಯೋಗ ಸೃಷ್ಟಿ ಸಾಮರ್ಥ್ಯ ಕುಂಠಿತಗೊಳ್ಳಲಿದೆ ಎಂದು ಪೈ ಎಚ್ಚರಿಸಿದ್ದಾರೆ. ಸದ್ಯ ಜಿಬಿಎ ಆಯುಕ್ತರು ಮಳೆಗಾಲದ ಮುನ್ನೆಚ್ಚರಿಕೆ ಹಾಗೂ ಗುಂಡಿ ಮುಚ್ಚುವ ಕಾರ್ಯಕ್ಕೆ ಸೂಚನೆ ನೀಡಿದ್ದರೂ, ಅದು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಕಾದು ನೋಡಬೇಕಿದೆ.
