ಬೆಂಗಳೂರು: ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಮತ್ತೆ ಬಿಜೆಪಿ ಮರುಳುತ್ತಾರಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಕರೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಪತ್ರದಲ್ಲಿ ಅವರು ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳನ್ನು ಕೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಮಾಜಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಸೋಮಶೇಖರ್ ಸಾಲು ಸಾಲು ಪ್ರಶ್ನೆ ಮಾಡಿ ಉತ್ತರಕ್ಕೆ ಆಗ್ರಹಿಸಿದ್ದಾರೆ. ಉತ್ತರ ಕೊಡಿ, ಮುಂದಿನ ನನ್ನ ನಿರ್ಣಯ ಏನಾಗಿರಬೇಕು ಎನ್ನುವ ದೃಷ್ಟಿಯಿಂದ ನೀವು ಕೊಡುವ ಉತ್ತರ ಬಹಳ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ಯಡಿಯೂರಪ್ಪಗೆ ಸುದೀರ್ಘ ಪತ್ರ ಬರೆದ ಸೋಮಶೇಖರ್!
ಎಸ್.ಟಿ ಸೋಮಶೇಖರ್ ಅವರು ಬರೆದ ಪತ್ರದಲ್ಲಿ, ‘ನಾನು ಯಾವುದೇ ಆಮಿಷ ಅಥವಾ ಅಪೇಕ್ಷೆ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ನಮ್ಮ ಸಹಕಾರದಿಂದ ನೀವು ಮುಖ್ಯಮಂತ್ರಿ ಆದಿರಿ. ನನ್ನನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಿಮ್ಮ ಮೇಲೆ ಗೌರವವಿದೆ. 2023ರಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದಿದ್ದೇನೆ’ ಎಂದುಹೇಳುವ ಮೂಲಕ ತಮ್ಮ ಹಳೆಯ ಸಹಕಾರವನ್ನು ನೆನಪಿಸಿದ್ದಾರೆ. ಜೊತೆಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
ಎಸ್.ಟಿ ಸೋಮಶೇಖರ್ ಇನ್ನೂ ಮುಂದುವರೆದು, ಕ್ಷೇತ್ರದಲ್ಲಿ ಸಮಸ್ಯೆ ಬಂದಾಗ ನನ್ನ ಮಗ ರಾಜ್ಯಾಧ್ಯಕ್ಷನಾಗುತ್ತಾನೆ, ಸರಿಪಡಿಸುತ್ತಾನೆ, ಪಕ್ಷ ಬಿಡಬೇಡಿ ಎಂದು ನೀವೇ ಹೇಳಿದ್ದಿರಿ. ಆದರೆ ಪಕ್ಷದಿಂದ ಉಚ್ಚಾಟನೆ ಮಾಡಿದ್ದರೂ ವಾಪಸ್ ತೆಗೆದುಕೊಳ್ಳಲಿಲ್ಲ. ಇದರಿಂದ ತಮಗೆ ತುಂಬಾ ನೋವಾಗಿದೆ ಎಂದು ಸೋಮಶೇಖರ್ ಪತ್ರದಲ್ಲಿ ಬರೆದಿದ್ದಾರೆ.
13 ಪ್ರಶ್ನೆಗಳನ್ನು ಬಿಎಸ್ವೈ ಮುಂದಿಟ್ಟ ಸೋಮಶೇಖರ್!
ಸದನದಲ್ಲಿ ನೈಸ್ ವಿಚಾರವಾಗಿ ಚರ್ಚೆ ಮಾಡಿದ್ದಕ್ಕೆ ಬಿಜೆಪಿ ನಾಯಕ ರುದ್ರೇಶ್ ಅವರು ಸುದ್ದಿಗೋಷ್ಠಿ ಕರೆದು ‘ಯಾರ ಬೂಟು ನೆಕ್ಕಲು ಬರುತ್ತೀಯ?’ ಎಂದು ಅಪಮಾನ ಮಾಡಿದ್ದಾರೆ ಎಂದು ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ಕ್ಷೇತ್ರದಲ್ಲಿ ಆರು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದಿದ್ದೇನೆ. ಇಷ್ಟು ಅಗೌರವವಾಗಿ ಮಾತನಾಡುವುದು ಸರಿಯಲ್ಲ’ ಎಂದು ಗರಂ ಆಗಿದ್ದಾರೆ. ಪತ್ರದಲ್ಲಿ ಸೋಮಶೇಖರ್ ಅವರು ಯಡಿಯೂರಪ್ಪ ಅವರಿಗೆ 13 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ಕೆಲವು ಮುಖ್ಯ ಪ್ರಶ್ನೆಗಳು ಇವೆ.
ಬಿಜೆಪಿಗೆ ಬರಬೇಕೆಂದರೆ ಬೂಟು ನೆಕ್ಕಿ ಬರಬೇಕಾ?
ಬಿಜೆಪಿಯಲ್ಲಿ ಬೂಟು ನೆಕ್ಕುವ ಸಂಸ್ಕೃತಿ ಇದೆಯಾ?
ಬೂಟು ನೆಕ್ಕುವವರಿಗೆ ಮಾತ್ರ ಅವಕಾಶವೇ?
ಬೂಟು ನೆಕ್ಕದ ಕಾರಣಕ್ಕೆ ನನ್ನನ್ನು ಉಚ್ಚಾಟನೆ ಮಾಡಲಾಯಿತಾ?
ಬಿಜೆಪಿಗೆ ಮರಳಬೇಕೆಂದರೆ ನಿಮ್ಮ ಬೂಟು ನೆಕ್ಕಬೇಕಾ?
ಅಥವಾ ನಿಮ್ಮಮಗ ವಿಜಯೇಂದ್ರ ಅವರ ಬೂಟು ನೆಕ್ಕಬೇಕಾ?
ರುದ್ರೇಶ್ ಅವರು ನೈಸ್ನ ದತ್ತು ಪುತ್ರರಾಗಿದ್ದು, ಅವರಿಗೆ ಪಕ್ಷದ ಜವಾಬ್ದಾರಿ ನೀಡಿದ್ದೀರಾ?
ಕರ್ನಾಟಕ ಬಿಜೆಪಿಯನ್ನು ವಿಜಯೇಂದ್ರ ಅಥವಾ ರುದ್ರೇಶ್ ನಡೆಸುತ್ತಿದ್ದಾರಾ?
ನೈಸ್ ಇಂದ ಆದ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಬಾರದಾ?
ಇಂತಹ ಕ್ಷುದ್ರಗ್ರಹನನ್ನು ನೀವು ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತೀರಾ?
ಹಾಗಾದರೆ ಆತನ ಹೇಳಿಕೆಗೆ ನಿಮ್ಮ ಸಹಮತ ಇದೆಯೆ?
ಬೂಟ್ ನೆಕ್ಕಬೇಕು ಎಂದು ನೀವು ಮತ್ತು ವಿಜಯೇಂದ್ರ ಬಯಸುತ್ತಿದ್ದೀರಾ?
ಕರ್ನಾಟಕದ ಯಾವುದೇ ವ್ಯಕ್ತಿ ಬಿಜೆಪಿಯಲ್ಲಿ ಬೆಳೆಯಬೇಕು ಎಂದರೆ ಯಾರ ಬೂಟ್ ನೆಕ್ಕಬೇಕು?
ಈ ಪ್ರಶ್ನೆಗಳ ಮೂಲಕ ಸೋಮಶೇಖರ್ ಅವರು ಬಿಜೆಪಿಯಲ್ಲಿ “ಬೂಟು ನೆಕ್ಕುವ ಸಂಸ್ಕೃತಿ” ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಸೋಮಶೇಖರ್ ಅವರು ಪತ್ರದ ಕೊನೆಯಲ್ಲಿ ‘ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ಉತ್ತರದ ಆಧಾರದ ಮೇಲೆ ನನ್ನ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ’ ಎಂದು ಬರೆದಿದ್ದಾರೆ. ಈ ಪತ್ರವು ಬಿಜೆಪಿ ಒಳಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಅವರ ಉಚ್ಚಾಟನೆಯ ನಂತರವೂ ಪಕ್ಷಕ್ಕೆ ವಾಪಸ್ ಬರಲು ಆಸೆಯಿದೆ ಎಂದು ತೋರುತ್ತಿದೆ.
ಯಡಿಯೂರಪ್ಪ ಇನ್ನೂ ಪತ್ರಕ್ಕೆ ಉತ್ತರ ನೀಡಿಲ್ಲ. ಆದರೆ ಈ ಪತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಚರ್ಚೆಯನ್ನು ಇನ್ನಷ್ಟು ಕಾವು ಹೆಚ್ಚಿಸಿದೆ. ಸೋಮಶೇಖರ್ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ನಂತರ ಉಚ್ಚಾಟಿತರಾಗಿದ್ದಾರೆ. ಈಗ ಮತ್ತೆ ಬಿಜೆಪಿಗೆ ಮರಳುವ ಆಸೆಯನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಬಿಜೆಪಿ ಒಳಗಿನ ಒಳಜಗಳ ಮತ್ತು ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ವಿಜಯೇಂದ್ರ ಮತ್ತು ರುದ್ರೇಶ್ ಅವರ ಬಗ್ಗೆ ಸೋಮಶೇಖರ್ ಅವರು ಕೇಳಿರುವ ಪ್ರಶ್ನೆಗಳು ಪಕ್ಷದಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ಮತ್ತೆ ಬಿಜೆಪಿಗೆ ಮರುಳುತ್ತಾರಾ ಉಚ್ಚಾಟಿತ ಶಾಸಕ? ಸಾಲು ಸಾಲು ಪ್ರಶ್ನೆ ಪತ್ರ ಬರೆದು ಉತ್ತರಕ್ಕೆ ಆಗ್ರಹ!
