ಬಾಗಲಕೋಟೆ: ಸುರ್ಜೇವಾಲಾ ಅವರೇ, ಸರಕಾರ ನಿಮ್ಮದೇ ಇದೆ. ನಿಮಗೆ ತಾಕತ್ತಿದ್ದರೆ ವಿದ್ಯಾರ್ಥಿ ಮತದಾರರನ್ನು ಇವತ್ತೇ ಬಂಧಿಸಿ ತೋರಿಸಿ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಸವಾಲು ಹಾಕಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಯುವಕರು, ಕಾಲೇಜು ವಿದ್ಯಾರ್ಥಿಗಳು ಮತ ಹಾಕಿದರೆ ಬಂಧಿಸುವುದಾಗಿ ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಭಯ ಸೃಷ್ಟಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಖಂಡಿಸಿದರು. ರಾಜ್ಯದಲ್ಲಿ ಇನ್ನೂ ಎಸ್.ಐ.ಆರ್.ಆಗಿಲ್ಲ ಎಂದು ತಿಳಿಸಿದರು.
ಸೋಲಿನ ಭಯದಿಂದ ಈ ರೀತಿ ಮಾತನಾಡುತ್ತಾರೆ. ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರನ್ನು ಮನೆ ಮನೆಗೆ ಕಳಿಸಿ ನೀವು ಕಾಂಗ್ರೆಸ್ಸಿಗೆ ಮತ ಹಾಕದೇ ಇದ್ದರೆ, ನಿಮ್ಮ 5 ಗ್ಯಾರಂಟಿ ರದ್ದಾಗುತ್ತವೆ ಎಂದು ಭಯ ಹುಟ್ಟಿಸುತ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು.
ವಿಳಾಸ, ಆಧಾರ್ ಕಾರ್ಡ್ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದವರಿಗೆ ಒಂದು ಚುನಾವಣೆಯಲ್ಲಿ ಒಂದೇ ಮತದಾನ ಮಾಡಲು ಅವಕಾಶವಿದೆ ಎಂದು ಗಮನ ಸೆಳೆದರು. ಬಾಗಲಕೋಟೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು 5-6 ವರ್ಷ, 10 ವರ್ಷ ಇಲ್ಲೇ ಇರುತ್ತಾರೆ ಎಂದು ಗಮನ ಸೆಳೆದರು.
ನೀವು ಉತ್ತಮ ಆಡಳಿತ ನೀಡಿದ್ದರೆ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಹಲವು ದಿನ ಇಲ್ಲಿ ಠಿಕಾಣಿ ಹೂಡಿ ರೊಕ್ಕದ ಹೊಳೆ ಹರಿಸಿ ಚುನಾವಣೆ ಮಾಡುವುದಲ್ಲ ಎಂದು ಆರೋಪಿಸಿದರು. ಹಿಂದೆ ರಾಮಕೃಷ್ಣ ಹೆಗಡೆ, ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಉಪ ಚುನಾವಣೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಅವರ ಗರಡಿಯಲ್ಲಿದ್ದ ಸಿದ್ದರಾಮಯ್ಯನವರು ರೊಕ್ಕದ ಹೊಳೆ, ಹೆಂಡದ ಹೊಳೆ ಹರಿಸಲು ಠಿಕಾಣಿ ಹೂಡುವುದು ಶೋಭೆ ತರುವುದಿಲ್ಲ ಎಂದು ನುಡಿದರು.
ನಮ್ಮ ಅಭ್ಯರ್ಥಿ ಚರಂತಿಮಠ ಅವರು ತಮ್ಮ ಹಿಂದಿನ ಸಾಧನೆ, ಮುಂದೇನು ಮಾಡಲು ಬಯಸುತ್ತಾರೆ ಎಂಬ ಬಗ್ಗೆ ಕಿರುಹೊತ್ತಗೆ ಮೂಲಕ ತಿಳಿಸಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಶಾಸಕರ ಸಾಧನೆ, ಸರಕಾರದ ಸಾಧನೆ ಬಗ್ಗೆ ತಿಳಿಸಿ ಎಂದು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಎನ್.ಮಹೇಶ್, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೆರೆ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಪ್ರಮುಖರು ಇದ್ದರು.
ತಾಕತ್ತಿದ್ದರೆ ವಿದ್ಯಾರ್ಥಿ ಮತದಾರರನ್ನು ಬಂಧಿಸಿ ತೋರಿಸಿ- ಗೋವಿಂದ ಕಾರಜೋಳ ಸವಾಲು
