Ad image

ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅನೈತಿಕ ಸಂಬಂಧವೇ ಮುಳುವಾಯ್ತು, ಮೂವರು ಅರೆಸ್ಟ್!

Team SanjeMugilu
2 Min Read

ಗದಗ: ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದ ಯುವಕ ಚಂದ್ರು ಕುರಿ ನಾಪತ್ತೆಯಾಗಿ, ನಂತರ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಇದೊಂದು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಪಕ್ಕಾ ಪ್ಲಾನ್ಡ್ ಮರ್ಡರ್ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪ್ರೇಯಸಿ ರತ್ನಾ, ಆಕೆಯ ಪತಿ ಈರಪ್ಪ ಮತ್ತು ಸಹೋದರ ಮಹಾಂತೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ
ಹುಯಿಲಗೋಳ ಗ್ರಾಮದ ಚಂದ್ರು ಕುರಿ ಮತ್ತು ಅದೇ ಗ್ರಾಮದ ರತ್ನಾ ಕುದರಿ ನಡುವೆ ಕಳೆದ ಕೆಲವು ಸಮಯದಿಂದ ಅನೈತಿಕ ಸಂಬಂಧವಿತ್ತು. ರತ್ನಾಳಿಗೆ ಶಿರಹಟ್ಟಿ ತಾಲೂಕಿನ ಹೊಳಲಾಪುರ ಗ್ರಾಮದ ಈರಪ್ಪ ಎಂಬಾತನೊಂದಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ ಗಂಡನ ಜೊತೆ ಸರಿಯಾಗಿ ಸಂಸಾರ ಮಾಡದ ರತ್ನಾ, ಪದೇ ಪದೇ ತವರು ಮನೆಗೆ ಬಂದು ಚಂದ್ರು ಜೊತೆಗಿನ ಸಂಬಂಧ ಮುಂದುವರಿಸಿದ್ದಳು. ಈ ವಿಷಯ ರತ್ನಾಳ ಪತಿ ಈರಪ್ಪ ಹಾಗೂ ಸಹೋದರ ಮಹಾಂತೇಶನಿಗೆ ತಿಳಿದು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ ಇಬ್ಬರೂ ಕೇಳಿರಲಿಲ್ಲ.

ಪಕ್ಕಾ ಪ್ಲಾನ್ ಮಾಡಿ ಹತ್ಯೆ
ಚಂದ್ರು ಕುರಿಯನ್ನು ಮುಗಿಸಲು ಪ್ಲಾನ್ ಮಾಡಿದ ಪತಿ ಈರಪ್ಪ ಮತ್ತು ಸಹೋದರ ಮಹಾಂತೇಶ, ಮಾರ್ಚ್ 25ರ ಮಧ್ಯರಾತ್ರಿ ರತ್ನಾಳ ಕೈಯಿಂದಲೇ ಚಂದ್ರುಗೆ ಫೋನ್ ಮಾಡಿಸಿ ಮನೆಗೆ ಕರೆಸಿಕೊಂಡಿದ್ದಾರೆ. ಚಂದ್ರು ಬಂದಾಗ ಮನೆಯ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ಈರಪ್ಪ ಮತ್ತು ಮಹಾಂತೇಶ ಆತನ ಮೇಲೆರಗಿದ್ದಾರೆ. ನಂತರ ‘ನಿನ್ನ ಜೊತೆ ಮಾತನಾಡೋದಿದೆ ಬಾ’ ಎಂದು ನಿರ್ಜನ ಪ್ರದೇಶದ ಬ್ರಿಡ್ಜ್ ಬಳಿ ಕರೆದೊಯ್ದು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಶವದ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಅಲ್ಲಿಂದ ಪರಾರಿಯಾಗಿದ್ದರು.

48 ಗಂಟೆಯಲ್ಲಿ ಆರೋಪಿಗಳ ಬಂಧನ
ಮಾರ್ಚ್ 28ರಂದು ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದಾಗ ಗದಗ ಎಸ್ಪಿ ರೋಹನ್ ಜಗದೀಶ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿತ್ತು. ಮೊದಲು ಚಂದ್ರು ಮನೆಯವರೇ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿತ್ತಾದರೂ, ಚಂದ್ರು ಹೊಂದಿದ್ದ ಮಹಿಳೆಯರ ಸಂಪರ್ಕದ ಜಾಡನ್ನು ಹಿಡಿದು ತನಿಖೆ ನಡೆಸಿದಾಗ ರತ್ನಾ ಹಾಗೂ ಆಕೆಯ ಕುಟುಂಬದ ಕೈವಾಡವಿರುವುದು ಪತ್ತೆಯಾಯಿತು. ಧಾರವಾಡ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಮೂವರು ಆರೋಪಿಗಳನ್ನು ಪೊಲೀಸರು 48 ಗಂಟೆಯೊಳಗೆ ಹೆಡೆಮುರಿ ಕಟ್ಟಿದ್ದಾರೆ.

ಕಂಡವರ ಹೆಂಡತಿಯ ಸಹವಾಸ ಮಾಡಿದ ಯುವಕ ಹೆಣವಾದರೆ, ಇಬ್ಬರು ಮಕ್ಕಳ ತಾಯಿ ಸೇರಿದಂತೆ ಮೂವರು ಜೈಲು ಪಾಲಾಗಿದ್ದಾರೆ.

Share This Article