ಟೆಹ್ರಾನ್/ಜೆರುಸಲೆಂ: ಇರಾನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು, ಭಾರೀ ಗೊಂದಲ ಸೃಷ್ಟಿಸುತ್ತಿವೆ. ಒಮ್ಮೆ ಇರಾನ್ ಜೊತೆಗೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುವ ಟ್ರಂಪ್, ಮತ್ತೊಮ್ಮೆ ಇರಾನ್ ಮೇಲಿನ ದಾಳಿಗಳನ್ನು ತೀವ್ರಗೊಳಿಸುವ ಕುರಿತು ಹೇಳಿಕೆ ನೀಡುತ್ತಿದ್ದಾರೆ.
ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ಇಡೀ ಇರಾನ್ನನ್ನ ಸರ್ವನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ. ಇರಾನ್ ಕೂಡ ಒಂದಷ್ಟು ಷರತ್ತುಗಳನ್ನ ಮುಂದಿಟ್ಟು ಸದ್ಯದ ಕದನ ವಿರಾಮ ಪ್ರಸ್ತಾಪವನ್ನ ತಿರಸ್ಕರಿಸಿದೆ. ಈ ಬೆನ್ನಲ್ಲೇ ಇರಾನ್ನ ಭಯೋತ್ಪಾದನಾ ಚಟುವಟಿಕೆಗಳ ಸೌಲಭ್ಯಗಳ ಮೇಲೆ ಇಸ್ರೇಲ್ ಮಿಸೈಲ್ ದಾಳಿ ನಡೆಸಿದ್ದು, ಹಲವೆಡೆ ಭಾರೀ ಸ್ಫೋಟಗಳು ಸಂಭವಿಸಿವೆ.
ಹೌದು. ಒಂದೇ ರಾತ್ರಿಯಲ್ಲಿ ಇಡೀ ಇರಾನ್ನ ಸರ್ವನಾಶ ಮಾಡಬಹುದು, ಅದು ಮಂಗಳವಾರ ಇರಬಹುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇರಾನ್ನ ಭಯೋತ್ಪಾದನಾ ಚಟುವಟಿಕೆಗಳ ಸೌಲಭ್ಯಗಳನ್ನ ಗುರಿಯಾಗಿಸಿ ಇರಾನ್ ವಾಯುದಾಳಿ ನಡೆಸಿದೆ. ರಾಜಧಾನಿ ಟೆಹ್ರಾನ್ ನ ಕೆಲವು ಭಾಗಗಳು ಮತ್ತು ಹತ್ತಿರದ ಕರಾಜ್ ನಗರ ಸೇರಿದಂತೆ ಹಲವೆಡೆ ಸ್ಫೋಟಗಳು ಸಂಭವಿಸಿದೆ ಎಂದು ಇಸ್ರೇಲ್ ಸೇನೆ ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್ನಲ್ಲಿ ಹೇಳಿಕೊಂಡಿದೆ. ಇರಾನ್ ಮಾಧ್ಯಗಳು ಸಹ ಸ್ಫೋಟಗಳ ಕುರಿತು ವರದಿ ಮಾಡಿವೆ.
ಇರಾನ್ನ 7 ಖಂಡಾಂತರ ಕ್ಷಿಪಣಿ ತಡೆಹಿಡಿದ ಸೌದಿ
ಇನ್ನೂ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ, ಸೌದಿ ಅರೇಬಿಯಾ ಮಂಗಳವಾರ ತನ್ನ ವಾಯು ರಕ್ಷಣಾ ಪಡೆಗಳು ಇರಾನ್ನ 7 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿದು ನಾಶಪಡಿಸಿವೆ ಎಂದು ಹೇಳಿಕೊಂಡಿದೆ.
