Ad image

ಮೈಸೂರು-ಬೆಂಗಳೂರಿಗರಿಗೆ ಬಿಗ್ ಶಾಕ್; ಕಬಿನಿ, ಕೆಆರ್‌ಎಸ್ ಖಾಲಿ ಖಾಲಿ! ನೀರಿಗೆ ಶುರುವಾಗುತ್ತಾ ಹಾಹಾಕಾರ?

Team SanjeMugilu
1 Min Read

ಮೈಸೂರು: ಹಳೆ ಮೈಸೂರು ಭಾಗದ ಜನರ ನಿದ್ದೆಗೆಡಿಸುವ ಸುದ್ದಿಯೊಂದು ಈಗ ಹೊರಬಿದ್ದಿದೆ. ಕನ್ನಂಬಾಡಿ ಕಟ್ಟೆ ಮತ್ತು ಕಬಿನಿ  ಜಲಾಶಯದಲ್ಲಿ ನೀರಿನ ಮಟ್ಟ ಸದ್ದಿಲ್ಲದೆ ಕುಸಿಯುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ  ಜಿಲ್ಲೆಗಳ ಬಾಯಾರಿಕೆ ನೀಗಿಸುವ ಜೀವನಾಡಿ ಕೆ.ಆರ್.ಎಸ್ (KRS) ಈಗ ಜಲಕ್ಷಾಮದ ಸುಳಿಗೆ ಸಿಲುಕಿದೆ. ಇಷ್ಟು ದಿನ 110 ಅಡಿಯ ಗಡಿಯಲ್ಲಿದ್ದ ನೀರಿನ ಮಟ್ಟ, ಈಗ ದಿಢೀರನೆ ಕುಸಿತ ಕಂಡಿದೆ. ಸೂರ್ಯನ ಪ್ರಖರತೆಗೆ ನೀರು ಆವಿಯಾಗುತ್ತಿದ್ದರೆ, ಜಲಾಶಯಕ್ಕೆ ಬರುವ ಒಳಹರಿವು ಕೇವಲ 108 ಕ್ಯೂಸೆಕ್. ಆದರೆ ಆತಂಕದ ವಿಷಯ ಏನೆಂದರೆ, ಇಲ್ಲಿಂದ ಹೊರಹೋಗುತ್ತಿರುವ ನೀರು ಬರೋಬ್ಬರಿ 3,597 ಕ್ಯೂಸೆಕ್. ಅಂದರೆ ಬರುವುದಕ್ಕಿಂತ ಹೋಗುತ್ತಿರುವುದೇ ಹೆಚ್ಚು. 124.80 ಅಡಿಯ ಈ ಜಲಾಶಯದಲ್ಲಿ ಈಗ ಇರುವುದು ಬರಿ 102.26 ಅಡಿ ಮಾತ್ರ.

ಕಬಿನಿ ಜಲಾಶಯದ ಸ್ಥಿತಿಯೂ ಶೋಚನೀಯ
ಇತ್ತ ಹೆಚ್.ಡಿ.ಕೋಟೆಯ ಕಬಿನಿ ಜಲಾಶಯದ ಕಥೆಯೂ ಭಿನ್ನವಾಗಿಲ್ಲ. ಜಲಾಶಯಕ್ಕೆ ಬರುವ ನೀರಿಗಿಂತ ಹತ್ತು ಪಟ್ಟು ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. 2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ನೀರಿನ ಸಂಗ್ರಹ ಕೇವಲ 2,261.88 ಅಡಿಗಳಿಗೆ ತಲುಪಿದೆ. ವರುಣ ದೇವ ಇನ್ನು ಕೃಪೆ ತೋರದಿದ್ದರೆ ಪರಿಸ್ಥಿತಿ ಕೈಮೀರುವುದು ಗ್ಯಾರಂಟಿ.

ಕುಡಿಯುವ ನೀರಿಗೂ ಬರಲಿದೆ ಹಾಹಾಕಾರ?
ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಾತ್ರ ಹನಿ ಮಳೆಯೂ ಇಲ್ಲ. ಒಳಹರಿವು ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಹೊರಹರಿವು ಸಾವಿರಾರು ಕ್ಯೂಸೆಕ್‍ಗಳಲ್ಲಿದೆ. ಹೀಗೆಯೇ ಮುಂದುವರಿದರೆ, ಸ್ನಾನಕ್ಕಿರಲಿ ಕುಡಿಯುವ ನೀರಿಗೂ ಕೊಡ ಹಿಡಿದು ರಸ್ತೆಗೆ ಇಳಿಯುವ ಕಾಲ ದೂರವಿಲ್ಲ.

ಪ್ರವಾಸಿಗರ ಆಕ್ರೋಶ ಇದು
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕುಟುಂಬ ಸಮೇತ ಪ್ರವಾಸಿಗರು, ಅಲ್ಲದೇ ದೇಶ-ವಿದೇಶಗಳಿಂದ ಬರುವ ಅತಿಥಿಗಳು ಪ್ರತಿದಿನ KRS ತಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಪ್ರವೇಶಕ್ಕೆ ರೂಪಾಯಿ 100 ರೂಪಾಯಿ ಟಿಕೆಟ್ ಪಾವತಿಸಿದರೂ ಯಾವುದೇ ಮೂಲಭೂತ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. 100 ಕೊಟ್ಟು ಒಳಗೆ ಪ್ರವೇಶಿಸಿದ್ದೇವೆ, ಆದರೆ ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲ, ಶೌಚಾಲಯಗಳ ಸ್ಥಿತಿ ದಯನೀಯ, ಬೆಳಕು-ನೀರು ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ಪ್ರವಾಸಿಗರು ಕಿಡಿಕಾರಿದ್ದಾರೆ.

Share This Article