Ad image

ಹುಬ್ಬಳ್ಳಿಯಲ್ಲಿ ರಾಜಕೀಯ ಪ್ರತಿಷ್ಠೆಯ ಕಣವಾದ ಬಸವ ಜಯಂತಿ ಆಚರಣೆ

Team SanjeMugilu
2 Min Read

ಹುಬ್ಬಳ್ಳಿ: ಬಸವಣ್ಣನವರ ತತ್ವಗಳನ್ನು ಸಾರಬೇಕಾದ ಬಸವ ಜಯಂತಿ ಆಚರಣೆಯು ಇದೀಗ ಹುಬ್ಬಳ್ಳಿಯಲ್ಲಿ ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಲಿಂಗಾಯತ ಸಮುದಾಯದ ಐಕ್ಯತೆಯನ್ನು ಸಾರುವ ಬದಲು, ಸಮುದಾಯದ ಪ್ರಮುಖ ನಾಯಕರ ನಡುವಿನ ಭಿನ್ನಮತವು ಸಾರ್ವಜನಿಕವಾಗಿ ಹೊರಬಿದ್ದಿದ್ದು, ಎರಡೆರಡು ಕಾರ್ಯಕ್ರಮಗಳ ಆಯೋಜನೆಗೆ ವೇದಿಕೆ ಸಜ್ಜಾಗಿದೆ.

ಒಂದೇ ಸಮುದಾಯದವರು ಒಂದೇ ಕಡೆ ಸೇರಿ ಬಸವ ಜಯಂತಿಯನ್ನು ಆಚರಿಸುವ ಬದಲು, ಹುಬ್ಬಳ್ಳಿಯಲ್ಲಿ ಎರಡು ಪ್ರತ್ಯೇಕ ಬಣಗಳು ಸಮಾನಾಂತರ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸಿವೆ. ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ನೇತೃತ್ವದ ‘ಹುಬ್ಬಳ್ಳಿ ಶ್ರೀ ಬಸವ ಉತ್ಸವ ಸಮಿತಿ’ ಈಗಾಗಲೇ ಅತಿಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಅದ್ಧೂರಿಯಾಗಿ ಆಚರಣೆಗೆ ಮುಂದಾಗಿದೆ. ಈ ಸಮಿತಿಯು ಹಾಲಿ ಶಾಸಕ ಮಹೇಶ ಟೆಂಗಿನಕಾಯಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಕಾರ್ಯಕ್ರಮದಿಂದ ದೂರಿಟ್ಟಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಅಸಮಾಧಾನಗೊಂಡಿರುವ ಮತ್ತೊಂದು ಬಣ, ಪ್ರತ್ಯೇಕವಾಗಿ ಬಸವ ಜಯಂತಿ ಆಚರಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಯು ಬಿಜೆಪಿ ಪಾಳೆಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಈ ಕಾರ್ಯಕ್ರಮದ ಆಯೋಜನೆಯ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಅಧಿಕೃತ ಮಾಹಿತಿ ಇಲ್ಲವೇ? ಅಥವಾ ಅವರ ಅರಿವಿಗೆ ಬಾರದೆಯೇ ಈ ರಾಜಕೀಯ ಹಗ್ಗಜಗ್ಗಾಟ ನಡೆಯುತ್ತಿದೆಯೇ ಎಂಬ ಅನುಮಾನಗಳು ಸ್ಥಳೀಯ ಮಟ್ಟದಲ್ಲಿ ವ್ಯಕ್ತವಾಗಿವೆ. ಇನ್ನು, ಜಿಲ್ಲೆಯ ಪ್ರಭಾವಿ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಶಂಕರ ಪಾಟೀಲ ಮುನೇನಕೊಪ್ಪ ಅವರ ನಿಗೂಢ ಮೌನವು ಸಮುದಾಯದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಒಡಕಿನ ನಡುವೆಯೂ, ಬಸವ ಉತ್ಸವ ಸಮಿತಿಯು ಪ್ರತಿಷ್ಠಿತ ‘ಬಸವ ಪುರಸ್ಕಾರ’ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವೀರಣ್ಣ ಮತ್ತಿಗಟ್ಟಿ, ಪ್ರಭಾಕರ ಕೋರೆ ಹಾಗೂ ಬಸವರಾಜ ಹೊರಟ್ಟಿ ಅವರಿಗೆ ಪುರಸ್ಕಾರ ನೀಡಲು ಸಿದ್ಧತೆ ನಡೆದಿದೆ. ಆದರೆ, ಸಮುದಾಯದ ಮುಖಂಡರ ನಡುವಿನ ಈ ಬಿರುಕು, ಬಸವಣ್ಣನವರ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಾಜಕೀಯ ಲಾಭಕ್ಕಾಗಿ ಅಥವಾ ವೈಯಕ್ತಿಕ ಪ್ರತಿಷ್ಠೆಯ ಕಾರಣಕ್ಕಾಗಿ ಬಸವ ಜಯಂತಿಯನ್ನು ರಾಜಕೀಯಗೊಳಿಸುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಲಿಂಗಾಯತ ಸಮುದಾಯದ ಹಿರಿಯರ ನಡುವೆ ಕೇಳಿಬರುತ್ತಿದೆ. ಈ ಬಾರಿಯ ಎರಡೆರಡು ಆಚರಣೆಗಳು ಸಮುದಾಯದ ಒಗ್ಗಟ್ಟನ್ನು ಪರೀಕ್ಷೆಗೆ ಒಡ್ಡಿದ್ದು, ಭವಿಷ್ಯದಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share This Article