Ad image

ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಭಾರಿ ಗಲಾಟೆ, ಚಾಕುವಿನಿಂದ ಇರಿದು ಮರ್ಮಾಂಗಕ್ಕೆ ಒದ್ದು ಹಲ್ಲೆ

Team SanjeMugilu
1 Min Read

ಚಾಮರಾಜನಗರ: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು ಇರಿತದಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ  ಜಿಲ್ಲೆಯ ಕೊಳ್ಳೇಗಾಲದ ಆರ್​ಎಸ್ ಫಂಕ್ಷನ್ ಹಾಲ್‌ನಲ್ಲಿ ನಡೆದಿದೆ. ಕೇವಲ 70 ಗ್ರಾಂ ಚಿನ್ನದ ವ್ಯತ್ಯಾಸಕ್ಕಾಗಿ ವಧು-ವರರ ಕಡೆಯವರು ಬೀದಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಾಕುವಿನಿಂದ ಇರಿದು, ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಲಾಗಿದ್ದು, ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಳ್ಳೇಗಾಲದ ಆರ್​ಎಸ್ ಫಂಕ್ಷನ್ ಹಾಲ್‌ನಲ್ಲಿ ನಡೆದಿದ್ದೇನು?
ಮುದಾಸಿರ್ ಮತ್ತು ಗುಲ್ನಾಜ್ ಭಾನು ಎಂಬವರ ವಿವಾಹ ಇಂದು (ಏಪ್ರಿಲ್ 29) ನಿಶ್ಚಯವಾಗಿತ್ತು. ಆದರೆ ಮಂಗಳವಾರ ರಾತ್ರಿ ನಡೆದ ಅರಶಿಣ ಶಾಸ್ತ್ರದ ವೇಳೆ ವರನ ಕಡೆಯವರು ಒಂದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ ವಧುವಿನ ಕುಟುಂಬಸ್ಥರು ತಕರಾರು ತೆಗೆದಿದ್ದರು. ಈ ಮನಸ್ಥಾಪದ ನಡುವೆಯೇ ಚಿನ್ನಾಭರಣದ ವಿಚಾರ ಮುನ್ನೆಲೆಗೆ ಬಂದಿದೆ. ವಧುವಿನ ಕಡೆಯವರು 100 ಗ್ರಾಂ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ವರನ ಕಡೆಯವರು ಕೇವಲ 30 ಗ್ರಾಂ ಚಿನ್ನ ತಂದಿದ್ದರು. ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬಸ್ಥರು ಮದುವೆಯೇ ಬೇಡ ಎಂದು ಗಲಾಟೆ ಆರಂಭಿಸಿದ್ದಾರೆ.

ಮರ್ಮಾಂಗಕ್ಕೆ ಒದ್ದು ಚಾಕು ಇರಿತ
ಬುಧವಾರ ಮುಂಜಾನೆ ವರನ ಪರವಾಗಿ ಸಂಬಂಧಿ ಮೊಹಮ್ಮದ್ ಕೈಸರ್ ರಾಜಿ ಮಾತುಕತೆಗೆ ತೆರಳಿದ್ದಾರೆ. ಈ ವೇಳೆ ತಮಿಳುನಾಡಿನಿಂದ ಬಂದಿದ್ದ ವಧುವಿನ ಸಂಬಂಧಿಕರು ರೊಚ್ಚಿಗೆದ್ದು ಕೈಸರ್ ಅವರ ಮರ್ಮಾಂಗಕ್ಕೆ ಒದ್ದು, ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಗಳಾದ ಸಮೀರ್ ಅಯಾಜ್, ಶೋಯೆಬ್ ಹಾಗೂ ವಧುವಿನ ಕಡೆಯ ಫೈರೋಜ್ ಖಾನ್, ಅಬ್ದುಲ್ ವಾಹೀದ್ ಮತ್ತು ಅಬ್ದುಲ್ ಆರೀಫ್ ಮೇಲೂ ಹಲ್ಲೆ ನಡೆದಿದೆ.

ಗಾಯಾಳುಗಳಿಗೆ ಮೊದಲು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆ ಹಾಗೂ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

Share This Article