ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸಿಎಂ ಮನೆಯಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್ಡಿಕೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಲೋಪಗಳ ಬಗ್ಗೆ ಚರ್ಚೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೇನೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ನೋಡಿದ್ದೀರಿ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಪ್ರಾರಂಭವಾಯ್ತು. ಹಲವಾರು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರು ಸೇರಿ ಎಲ್ಲರೂ ಸಂತೋಷದಲ್ಲಿದ್ದರು. ಕೃಷಿ ಚಟುವಟಿಕೆಗಳು ಆರಂಭವಾಗಿದ್ದವು, ಉತ್ತಮ ಬೆಳೆ ನಿರೀಕ್ಷೆ ಇತ್ತು. ಈಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ, ಕಾರವಾರ, ಚಿಕ್ಕಮಗಳೂರು ಕಡೆ ಮೊದಲು ಪ್ರವಾಹ
ಆಯ್ತು. ಈಗ ಹೈದ್ರಾಬಾದ್, ಮುಂಬೈ ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಮಳೆಯಾಗುತ್ತಿದೆ. ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಆರು ಜಿಲ್ಲೆಗಳ ಅಧಿಕಾರಿಗಳ ಜೊತೆಗೆ ಪರಿಸ್ಥಿತಿ ಚರ್ಚೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದೆ. ಭತ್ತ, ಹತ್ತಿ, ತೊಗರಿ ಬೆಳೆ ನಾಶವಾಗಿದೆ. ರೈತ ಚೇತರಿಸಿಕೊಳ್ಳಲು ಆಗುವುದಿಲ್ಲ. ಕಲ್ಯಾಣ ಕರ್ನಾಟಕದ ರೈತರು ನೋವಿನಲ್ಲಿದ್ದಾರೆ. ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ, 12 ಗೋ ಶಾಲೆಗಳು ಮುಳುಗಿ ಹೋಗಿವೆ ಎಂದು ತಿಳಿಸಿದ್ದಾರೆ.
ಮಂತ್ರಿಗಳು ಕಾಟಾಚಾರಕ್ಕೆ ಹೋಗಿದ್ದಾರೋ ಬಿಟ್ಟಿದ್ದಾರೋ ನಾನು ಅದನ್ನು ಮಾತನಾಡುವುದಿಲ್ಲ. 36 ಜನರು ಮಂತ್ರಿಗಳಿದ್ದಾರೆ, ಎಲ್ಲೆಲ್ಲಿ ಭೇಟಿ ಕೊಟ್ಟಿದ್ದಾರೆ. ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ನಿರ್ದೇಶನ ನೀಡಿದ್ರೆ ಅವರು ಕೆಲಸ ಮಾಡ್ತಾರ? ಚಿಕ್ಕಮಗಳೂರು ಭಾಗದಲ್ಲಿ ಅಡಿಕೆ ನಾಶ ಆಯ್ತು, ಮನೆ ಕುಸಿದವು. ಪ್ರಾಣ ಹೋದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಬಿಟ್ಟು ಉಳಿದವರಿಗೆ ಸರ್ಕಾರ ಏನು ನೆರವು ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮ ಆಗಬೇಕಿತ್ತು. ಸಮೀಕ್ಷೆ ಪೂರ್ಣಗೊಂಡಿಲ್ಲ, ರೈತರಿಗೆ ಬೆಳೆ ನಾಶದ ಮಾಹಿತಿ ಕೇಳುತ್ತಿದ್ದಾರಂತೆ. ಕೆಲವು ರೈತರು ನನಗೆ ದೂರವಾಣಿ ಮೂಲಕ ಹೇಳುತ್ತಿದ್ದಾರೆ. ನನಗೆ ಆರೋಗ್ಯದ ಸಮಸ್ಯೆ ಇಲ್ಲದಿದ್ದರೆ ಅಲ್ಲೇ ಒಂದು ವಾರ ಕ್ಯಾಂಪ್ ಮಾಡುವೆ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸನ್ನಿವೇಶದಲ್ಲ ಹೇಗೆ ನಿರ್ವಹಿಸಬೇಕು ಕಲಿತಿದ್ದೇನೆ. ಹಿಂದೆ ಸಿಎಂ ಆಗಿದ್ದಾಗ ಪರಿಹಾರ ಕೊಟ್ಟು, ಮನೆಗೆ ಕಟ್ಟಿಸಿಕೊಟ್ಟೆ, ಮನೆ ಕಟ್ಟುವವರೆಗೂ ಬಾಡಿಗೆ ನೀಡಿದೆ. ನಾವು ಈಗ ಮಾತನಾಡಿದರೆ ನೀವು ಏನ್ ಮಾಡಿದ್ರಿ ಅಂತಾ ಕೇಳ್ತಾರೆ. ನೀವು ಪದೇ ಪದೇ ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೊಗಬೇಡಿ. ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ನಂಬಿಕೆ ಇದೆ. ಸರಿಯಾದ ರೀತಿಯಲ್ಲಿ ಸೌಜನ್ಯಯುತವಾಗಿ ಬಂದು ನೆರವು ಕೇಳಬೇಕು. ಅಲ್ಲಿ ಬೆಂಗಳೂರಿನಲ್ಲಿ ಕೂತು ಅನ್ಯಾಯ ಆಗಿದೆ ಅಂದರೆ. ನಾನು ಸಿಎಂ ಆಗಿದ್ದಾಗ ಮನಮೋಹನ್ ಸಿಂಗ್ ಸರ್ಕಾರ ಇತ್ತು. ನಾನು ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆ ಮಾಡಲಿಲ್ಲ. ಕೊಡಗಿನಲ್ಲಿ ಅನಾಹುತ ಆದಾಗ ಮೋದಿ ಕರೆ ಮಾಡಿದ್ದರು. ಈ ಬಾಂಧವ್ಯ ರಾಜ್ಯ ಸರ್ಕಾರ ಉಳಿಸಿಕೊಂಡು ಹೋಗಬೇಕು. ಈಗಲೂ ಒರಟು ಮಾತುಗಳನ್ನು ಬಿಡಬೇಕು. ರಾಜ್ಯದ ಒಬ್ಬ ಮಂತ್ರಿ ಈ ಸಂಬಂಧ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿದ್ದಾರಾ, ಯಾವುದಾದರೂ ನಿಯೋಗ ಬಂದಿದ್ಯಾ? ಅದ್ಯಾವೋದು ಜಾತಿ ಗಣತಿ ಅಂತೆ ಎಂದು ಲೇವಡಿ ಮಾಡಿದ್ದಾರೆ