ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ರೈತರು ಭಾರೀ ಸಂಕಷ್ಟಕ್ಕೊಳಗಾಗಿದ್ದಾರೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಆರ್ಭಟದಿಂದ ಬೆಳೆಗಳು ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳೆ ಹಾನಿ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಕೇಂದ್ರದಿಂದ ತಂಡ ಕಳುಹಿಸುವಂತೆ ಮತ್ತು ಪರಿಹಾರ ನೀಡುವಂತೆ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.
ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಜತೆ ಕುಮಾರಸ್ವಾಮಿ ಚರ್ಚೆ
ಉತ್ತರ ಕರ್ನಾಟಕ ಪ್ರವಾಹ, ಮಳೆ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಹೆಚ್‌ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದಿಂದ ಅಧ್ಯಯನ ತಂಡ ಕಳುಹಿಸಿ ತಳಮಟ್ಟದ ವರದಿ ಪಡೆಯುವಂತೆ ಹಾಗೂ ಎನ್ಡಿಆರ್ಎಫ್ ಮೂಲಕ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಕುಮಾರಸ್ವಾಮಿ ಅವರು ಪ್ರಧಾನಿ ಹಾಗೂ ಗೃಹ ಸಚಿವರನ್ನು ವಿನಂತಿಸಿದ್ದಾರೆ. ರೈತರ ಸಂಕಷ್ಟ ನಿವಾರಣೆಗೆ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನೈಋತ್ಯ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 12.54 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಎರಡು ದಿನಗಳ ಹಿಂದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದರು. ಭೀಮಾ ಜಲಾನಯನ ಪ್ರದೇಶದಲ್ಲಿನ ಪ್ರವಾಹದೊಂದಿಗೆ ಸೆಪ್ಟೆಂಬರ್‌ನಲ್ಲಿಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದವು. ಎರಡನೇ ಸುತ್ತಿನ ಪ್ರವಾಹವು ಮುಖ್ಯವಾಗಿ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸುಮಾರು 7.24 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚುವರಿ ಬೆಳೆ ನಷ್ಟಕ್ಕೆ ಕಾರಣವಾಯಿತು ಎಂದು ಅವರು ಮಾಹಿತಿ ನೀಡಿದ್ದರು. ಪ್ರವಾಹ ಪೀಡಿತ ರೈತರಿಗೆ ಬೆಳೆಹಾನಿ ಪರಿಹಾರಕ್ಕೆಂದು 2000 ಕೋಟಿ ರೂ. ನಿಗದಿ ಮಾಡಲಾಗಿದ್ದು, 30 ದಿನಗಳಲ್ಲಿ ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ ಮೂಲಕ ಹಣ ಪಾವತಿಸುವುದಾಗಿಯೂ ಅವರು ಭರವಸೆ ನೀಡಿದ್ದರು.
ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಉತ್ತರ ಕರ್ನಾಟಕ ರೈತರ ನೆರವಿಗೆ ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಆಗ್ರಹದ ಮೇರೆಗೆ ಕೇಂದ್ರದ ಅಧ್ಯಯನ ತಂಡ ಉತ್ತರ ಕರ್ನಾಟಕಕ್ಕೆ ಬರಲಿದೆಯೇ? ಕೇಂದ್ರ ಸರ್ಕಾರ ತಕ್ಷಣದ ಪರಿಹಾರ ಬಿಡುಗಡೆ ಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.