Ad image

ಮುಂದೆ ಜೆಡಿಎಸ್ 8-9 ಸ್ಥಾನಗಳಿಗೆ ಕುಸಿಯಲಿದೆ ಎಂದ ಡಿ.ಕೆ.ಶಿ

Team SanjeMugilu
1 Min Read

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ ವಿವಾದ ಇರಬೇಕು. ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ. ಕುಮಾರಸ್ವಾಮಿ ನನ್ನ ವಿರುದ್ಧ ಇರುವ ದಾಖಲೆ ತಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ನಗರದ ಸಿಟಿ ಸಿವಿಲ್ ಕೋರ್ಟ್ ಬಳಿ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.

“ಶಿವಕುಮಾರ್ ಜೊತೆ ಮಾತನಾಡಲು ಆಗುತ್ತಾ, ಆ ಯೋಗ್ಯತೆ ಉಳಿಸಿಕೊಂಡಿದ್ದಾರಾ” ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದಾಗ, “ಕುಮಾರಸ್ವಾಮಿ ಬಳಿ ಸಾಕ್ಷಿಗುಡ್ಡೆ ಇದ್ದರೆ, ಜನಕ್ಕೆ, ರಾಜ್ಯಕ್ಕೆ ಒಳ್ಳೆಯದು ಮಾಡಿದ್ದರೆ ಅದನ್ನು ದಾಖಲೆ ಸಮೇತ ಬಂದು ಹೇಳಲಿ. ಜನ ಅವರಿಗೆ ಮತ ಕೊಟ್ಟು ದೊಡ್ಡ ಹುದ್ದೆ ನೀಡಿದ್ದಾರೆ. ಸಾರ್ವಜನಿಕವಾಗಿ ಬಂದು ಉತ್ತರ ನೀಡಲಿ. ಕೇವಲ ಸುಳ್ಳು ಆರೋಪ ಮಾಡುತ್ತಾ, ಬೇರೆಯವರಿಗೆ ಹೆದರಿಸುತ್ತಾ ಹೋಗುವುದಲ್ಲ. ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆ, ತೆಗೆಯುತ್ತೇನೆ ಎಂದು ಹೇಳಿದಂತೆ ಅಲ್ಲ. ಬಹಿರಂಗ ಚರ್ಚೆಗೆ ಬರಲಿ. ಇದರಲ್ಲಿ ಅವಮಾನ ಆಗುವಂತದ್ದು ಏನೂ ಇಲ್ಲ. ಅವರು ಸಿಎಂ ಆಗಿದ್ದಾಗ ನಾನು ಸಾತನೂರಿಗೆ ಚರ್ಚೆಗೆ ಹೋಗಲಿಲ್ಲವೇ? “ನಾನು ಏನು ಮಾಡಿದ್ದೇನೆ, ನನ್ನ ಹುಳುಕು ಏನಿದೆ ಎಂಬುದನ್ನು ನೀನು ಹೇಳು, ನಿನ್ನದು ಏನಿದೆ ಎಂದು ನಾನು ಹೇಳುತ್ತೇನೆ. ನಂತರ ಜನ ತೀರ್ಮಾನ ಮಾಡುತ್ತಾರೆ” ಎಂದು ಸವಾಲು ಹಾಕಿದರು.

“ಅವರು ನನ್ನ ಯಾವ ವಿಚಾರ ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅವರ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲಾ. ಈ ಡಿ.ಕೆ. ಶಿವಕುಮಾರ್ ಅದಕ್ಕೆಲ್ಲಾ ಹೆದರುವ ಮಗ ಅಲ್ಲ” ಎಂದು ಪುನರುಚ್ಛರಿಸಿದರು.

ಎರಡೂವರೆ ವರ್ಷಗಳ ನಂತರ ನಮ್ಮ ಸರ್ಕಾರ ಬರುತ್ತದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಡೈಲಾಗ್ ಎಷ್ಟು ಸಾರಿ ಹೇಳಿ ಆಗಿದೆ. ಕೇಳಿ, ಕೇಳಿ ಸಾಕಾಗಿದೆ. ಇವರ ನಾಯಕತ್ವದಲ್ಲಿ ಇವರ ಪಕ್ಷ 18 ಸ್ಥಾನಕ್ಕೆ ಇಳಿದಿದೆ. ಮುಂದಿನ ಬಾರಿ 8 ಅಥವಾ 9 ಸ್ಥಾನಗಳಿಗೆ ಕುಸಿಯಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

Share This Article