ನವೆಂಬರ್ 6ಮತ್ತು 11ಕ್ಕೆ ಬಿಹಾರದಲ್ಲಿ ಮತದಾನ ನಡೆಯಲಿದೆ. ಬೆಂಗಳೂರಿನಲ್ಲೂ ಲಕ್ಷಾಂತರ ಬಿಹಾರಿಗಳು ವಾಸವಿದ್ದಾರೆ. ಇವರನ್ನು ಭಾನುವಾರ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್, ಬಿಹಾರಕ್ಕೆ ಹೋಗಿ ಮಹಾಘಟಬಂಧನ್‌ಗೆ ಮತ ಹಾಕಿ ಎಂದು ಕರೆ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಬಿಹಾರದ ಮುಖಂಡರು, ನೀವು ಸಿಎಂ ಆಗುವುದನ್ನು ನೋಡಲು ಬಯಸುತ್ತೇವೆ ಎಂದಿದ್ದಾರೆ. ನಮ್ಮ ಸಮಾಜದವರೆಲ್ಲರೂ ನಿಮ್ಮನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇವೆ. ಪೂರ್ತಿ ಬಿಹಾರವಾಸಿಗಳು ನಿಮ್ಮ ಜೊತೆಗಿದ್ದಾರೆ. ಲಕ್ಷಾಂತರ ಜನ ಬೆಂಗಳೂರಷ್ಟೇ ಅಲ್ಲ, ಬಿಹಾರದಲ್ಲೂ ನಿಮ್ಮ ಬೆಂಬಲಕ್ಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಬಿಹಾರವಾಸಿಗಳೆಲ್ಲಾ ನೀವು ಮುಖ್ಯಮಂತ್ರಿಯಾಗುವುದನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.
ಬಿಹಾರವಾಸಿಗಳ ಜತೆ ಮಾತನಾಡುತ್ತಾ ಡಿಕೆಶಿ ಕೊಟ್ಟ ಸಂದೇಶವೇನು?
ಬಿಹಾರವಾಸಿಗಳ ಜತೆ ಮಾತನಾಡುತ್ತಾ ಡಿಕೆ ಶಿವಕುಮಾರ್, ದೊಡ್ಡ ಸಂದೇಶವನ್ನೇ ಕೊಟ್ಟಂತಿದೆ. ‘ನೀವು ನನಗೆ ದೊಡ್ಡ ಸ್ಥಾನ ಸಿಗಬೇಕು ಎಂದು ಹೇಳಿದ್ದೀರಿ. ಅದು ಮುಖ್ಯವಲ್ಲ. ಅಲ್ಲಿ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ತಂದರೆ ನೀವು ನನಗೆ ಎಲ್ಲಾ ಸ್ಥಾನವನ್ನೂ ಕೊಟ್ಟಂತೆ. ನೀವೆಲ್ಲಾ ಹೋಗಿ ಬಿಹಾರದಲ್ಲಿ ಮತ ಚಲಾಯಿಸಿ ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ: ಅಹಿಂದ ಅಸ್ತ್ರವೇ?
ಬಿಹಾರ ಚುನಾವಣಾ ಹತ್ತಿರವಾಗುತ್ತಿದ್ದಂತೆ ರಾಜ್ಯ ನಾಯಕರ ದೆಹಲಿ ಯಾತ್ರೆಯೂ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಬೆನ್ನಲ್ಲೇ, ಸತೀಶ್ ಜಾರಕಿಹೊಳಿ ಇಂದಿನಿಂದ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಕುತೂಹಲ ಮೂಡಿಸಿದೆ.
ದೆಹಲಿಗೆ ಹೋಗಿ ವಾಪಸ್ ಆಗಿರುವ ಡಿಕೆಶಿ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಇದಕ್ಕೂ ಮುನ್ನವೇ ಸತೀಶ್ ಜಾರಕಿಹೊಳಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಸತೀಶ್ ಜಾರಕಿಹೊಳಿಯ ದೆಹಲಿ ಪ್ರವಾಸದ ವಿವರ ರಹಸ್ಯವಾಗಿಯೇ ಇದೆ. ಅಹಿಂದ ನಾಯಕರೆಂದ ಗುರುತಿಸಿಕೊಳ್ಳುತ್ತಿರುವ ಸತೀಶ್‌ಗೆ ಅಹಿಂದ ನಾಯಕತ್ವ ಸಿಗಬೇಕು ಎಂದು ಸಿಎಂ ಪುತ್ರ ಯತೀಂದ್ರ ಕೂಡಾ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಕೂಡಾ ಅಹಿಂದಕ್ಕೆ ನಾಯಕತ್ವ ಸಿಗಬೇಕು ಎಂದಿದ್ದಾರೆ. ಈ ಬೆನ್ನಲ್ಲೇ ದೆಹಲಿಗೆ ತೆರಳಿ ಮಲ್ಲಿಕಾರ್ಜುನ ಖರ್ಗೆ ಸಮಯವನ್ನೂ ನಿಗದಿ ಮಾಡಿಕೊಂಡಿರುವ ಸತೀಶ್, ವೇಣುಗೋಪಾಲ್, ಸುರ್ಜೇವಾಲರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಚೀವ ಸತೀಶ್ ಜೊತೆ ಐದಾರು ಮಾಜಿ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ಅಹಿಂದ ನಾಯಕತ್ವದ ಬಗ್ಗೆ ಚರ್ಚೆಯಾಗುತ್ತಾ? ಕೆಪಿಸಿಸಿ ಅಧ್ಯಕ್ಷ ರೇಸ್‌ನಲ್ಲಿರೋ ಸತೀಶ್ ಅಧ್ಯಕ್ಷಗಿರಿ ಬಗ್ಗೆಯೂ ಮಾತುಕತೆ ನಡೆಸ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಹೋಗುವವರೆಲ್ಲಾ ದೆಹಲಿಗೆ ಹೋಗಲಿ ಎಂದು ಡಿಕೆ ಶಿವಮುಮಾರ್ ಹೇಳಿದ್ದರೆ, ಸಿಎಂ ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ನವೆಂಬರ್ ಆದ್ಮೇಲೆ ಈ ಸರ್ಕಾರ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಕುರ್ಚಿ ಕದನ ದೆಹಲಿಗೆ ಬಂದು ನಿಂತಿದ್ದು, ಬಿಹಾರ ಚುನಾವಣೆ ಬಳಿಕ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿಸಿದೆ.
