Ad image

ಶಾಂತಕುಮಾರ್ ನಾಮಪತ್ರ ತಿರಸ್ಕೃತ – ವೆಂಕಟೇಶ ಪ್ರಸಾದ್ KSCA ಅಧ್ಯಕ್ಷರಾಗಿ ಅವಿರೋಧ ಆಯ್ಕೆ

Team SanjeMugilu
1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಅವಿರೋಧವಾಗಿ ಆಯ್ಕೆ ಆಗಿದ್ದು ಬ್ರಿಜೇಶ್ ಪಾಟೇಲ್ ಬಣಕ್ಕೆ ತೀವ್ರ ಮುಖಭಂಗವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಹಾಗೂ ಶಾಂತಕುಮಾರ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ಅಂತ್ಯಗೊಂಡು ಪರಿಶೀಲನೆ ವೇಳೆ ಬ್ರಿಜೇಶ್ ಬಣದ ಶಾಂತಕುಮಾರ್ ನಾಮಪತ್ರ ತಿರಸ್ಕೃತಗೊಂಡಿದೆ. ಶಾಂತಕುಮಾರ್ ಅವರು 200 ರೂ. ಸಬ್‌ಸ್ಕ್ರಿಪ್ಶನ್‌ ಫೀಸ್ ಕಟ್ಟಿಲ್ಲದ ಕಾರಣ ಅರ್ಜಿ ತಿರಸ್ಕೃತವಾಗಿದೆ. ಹೀಗಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ ಆಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕಣಕ್ಕಿಳಿಯುತ್ತಿದ್ದಂತೆ ಹಿರಿಯ ಆಟಗಾರರು ವೆಂಕಟೇಶ್ ಪ್ರಸಾದ್‌ಗೆ ಬೆಂಬಲ ನೀಡಿದ್ದರು. ಮಾಜಿ ಕ್ರಿಕೆಟಿಗ, ಮಾಜಿ ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸೇರಿದಂತೆ ಹಲವರು ಬೆಂಬಲ ನೀಡಿದ್ದರು.

ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು. ಹೀಗಾಗಿ ಚುನಾವಣೆ ಎದುರಾಗಿತ್ತು. ನಿಗದಿತ ವೇಳಾಪಟ್ಟಿಯಂತೆ ಇದೇ ನ. 30ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣಾ ಅಧಿಕಾರಿಯಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಬಸವರಾಜು ‘ಕೆಲವು ಗೊಂದಲಗಳು ತಲೆದೋರಿವೆ’ ಎಂಬ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಗೆ ಮುಂದೂಡಿದ್ದರು.

ಒಂದು ತಿಂಗಳು ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಕೆಎಸ್‌ಸಿಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹಾಗೂ ಬಿ.ಕೆ.ರವಿ ಸಲ್ಲಿಸಿದ್ದ ಎರಡು ಪ್ರತ್ಯೇಕ ರಿಟ್‌ ಅರ್ಜಿಗಳನ್ನು ಹೈಕೋರ್ಟ್‌ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ.21 ರಂದು ವಿಚಾರಣೆ ನಡೆಸಿತ್ತು.

ವಿಚಾರಣೆ ನಡೆಸಿದ ಕೋರ್ಟ್‌ ಕೆಎಸ್‌ಸಿಎಗೆ ಡಿ.7 ರಂದು ಚುನಾವಣೆ ನಡೆಸಬೇಕು. ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಬಿ ಸುಭಾಷ್‌ ಬಿ.ಅಡಿ ಅವರನ್ನು ಚುನಾವಣಾ ಮೇಲ್ವಿಚಾರಕರನ್ನಾಗಿ ನೇಮಕ ಮಾಡಬೇಕು ಎಂದು ಆದೇಶಿಸಿತ್ತು.

Share This Article