Ad image

2.5 ವರ್ಷ ಅಂತ ಹೇಳೇ ಇಲ್ಲ, 5 ವರ್ಷಕ್ಕೆ ಆಯ್ಕೆ ಆಗಿದ್ದೇನೆ – ಹೈಕಮಾಂಡ್‌ ನನ್ನ ಪರ ಇದೆ: ಸಿದ್ದರಾಮಯ್ಯ

Team SanjeMugilu
2 Min Read
ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ  ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಕುರ್ಚಿ ಕದನದ ಸ್ವಾರಸ್ಯಕರ ಚರ್ಚೆ ನಡೆದಿದೆ.

ಸಿಎಂ ಕಿಚಾಯಿಸಿದ ಅಶೋಕ್‌
ಕಲಾಪದ ನಡುವೆ ಸಿಎಂ ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್ . ಕಳೆದ 4 ದಿನಗಳಿಂದ ಬಳಲಿದ್ರಿ, ನಾವು ರಾಜಕೀಯ ನಿಶ್ಯಕ್ತಿ ಅನ್ಕೊಂಡಿದ್ವಿ. ನಿಮಗೆ ರಾಜಕೀಯ ಶಕ್ತಿ ಬಂದಿದೆಯಾ? ಅಂತ ಕಿಚಾಯಿಸಿದ್ರು. ಈ ವೇಳೆ ಪ್ರತಿಕ್ರಿಯಿಸಿದ ಸಿಎಂ, ನನಗೆ ರಾಜಕೀಯ ನಿಶ್ಯಕ್ತಿ ಇಲ್ವೇ ಇಲ್ಲ, ಅಂಥ ಅವಕಾಶ ಸೃಷ್ಟಿಯಾಗೋದಿಲ್ಲ. ರಾಜಕೀಯವನ್ನು ಅಷ್ಟೊಂದು ತಲೆ ಕೆಡಿಸಿಕೊಂಡು ಮಾಡೋ ಅಗತ್ಯವೂ ಇಲ್ಲ ಅಂತ ತಿರುಗೇಟು ನೀಡಿದ್ರು.

2.5 ವರ್ಷಕ್ಕೆ ಅಂತ ಹೇಳೇ ಇಲ್ಲ
ಇನ್ನೂ ಅಧಿವೇಶನದ ಕಡೇ ದಿನ ಸಿಎಂ ಸಿದ್ದರಾಮಯ್ಯ ಕುರ್ಚಿ ಕದನಕ್ಕೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಎರಡೂವರೆ ವರ್ಷ ಸಿಎಂ ಅಂತಾ ತೀರ್ಮಾನ ಆಗಿಲ್ಲ ಎನ್ನುವ ಮೂಲಕ ಫುಲ್ ಟರ್ಮ್ ಸಿಎಂ ಬ್ರಹ್ಮಾಸ್ತ್ರಾ ಪ್ರಯೋಗಿಸಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಚರ್ಚೆಗೆ ಉತ್ತರ ಕೊಡುವ ವೇಳೆ, ಬಿಜೆಪಿ ಸದಸ್ಯರ ಕಾಲೆಳೆಯುವ ಮಾತುಗಳನ್ನೇ ಮೆಟ್ಟಿಲುಗಳನ್ನಾಡಿ ಮಾಡಿಕೊಂಡ ಸಿಎಂ, ಪಕ್ಷದೊಳಗಿನ ವಿರೋಧಿಗಳಿಗೂ ಗುನ್ನಾ ಹೊಡೆದಿದ್ದಾರೆ. ಎರಡೂವರೆ ವರ್ಷ ಸಿಎಂ ಅಂತ ತೀರ್ಮಾನ ಆಗಿಲ್ಲ. ಶಾಸಕರು 5 ವರ್ಷಕ್ಕೆ ಸಿಎಂ ಆಯ್ಕೆ ಮಾಡಿದ್ದಾರೆ. ನಾನು ಐದು ವರ್ಷಕ್ಕೆ ಸಿಎಂ ಆಗಿ ಆಯ್ಕೆ ಆಗಿದ್ದೇನೆ ಅಂತ ವಿಪಕ್ಷ ನಾಯಕ ಅಶೋಕ್‌ಗೆ ತಿರುಗೇಟು ಕೊಟ್ಟಿದ್ದಾರೆ,

ಎರಡೂವರೆ ವರ್ಷಕ್ಕೆ ಅಂತ ಹೇಳೇ ಇಲ್ಲ, ಆ ತೀರ್ಮಾನ ಆಗಿಲ್ಲ. ಈಗ ನಾನೇ ಮುಖ್ಯಮಂತ್ರಿ, ಮುಂದೆಯೂ ನಾನೇ ಇರ್ತೀನಿ. ಈಗ ನಾನು ಸಿಎಂ ಆಗಿದ್ದೇನೆ, ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವೇ ಇದೆ. ಈಗಲೂ ನಾನೇ ಮುಖ್ಯಮಂತ್ರಿ, ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ. ನನಗೆ ದೈಹಿಕ ನಿಶ್ಯಕ್ತಿ ಇರಬಹುದು, ರಾಜಕೀಯ ನಿಶ್ಯಕ್ತಿ ಇಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ, ಹಿಂದೆಯೂ ಇರಲಿಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಅಧಿಕಾರ, ನಾನು ಹಣೆಬರಹದಲ್ಲಿ ನಂಬಿಕೆ ಇಟ್ಟಿಲ್ಲ ಎಂದರಲ್ಲದೇ ನಮಗೆ ಯಾರೂ ನಿರ್ದೇಶನ ಕೊಡೋರು ಇಲ್ಲ, ನಮಗೆ ನಾವೇ ನಿರ್ದೇಶಕರು, ನಾವೇ ಪ್ರೊಡ್ಯೂಸರ್, ನಾವೇ ಆ್ಯಕ್ಟರ್‌ಗಳು ಅಂತ ಅಧಿಕಾರ ಹಂಚಿಕೆ ಮಾತುಕತೆಗೆ ಬ್ರೇಕ್‌ ಹಾಕಿದ್ದಾರೆ.
Share This Article