ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರ ಕ್ರಮ ಮುಂದುವರಿದಿದೆ. ಬೆಳ್ಳಂಬೆಳಗ್ಗೆ ಇಂದು ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಬಾಗಲಕೋಟೆ, ವಿಜಯಪುರ (ಬಿಜಾಪುರ), ಉತ್ತರ ಕನ್ನಡ (ಕಾರವಾರ) ಮತ್ತು ರಾಯಚೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ತೀವ್ರ ತನಿಖೆ ಮುಂದುವರೆಸಿದ್ದಾರೆ.
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಲೋಕಾ ದಾಳಿ!
ಬಾಗಲಕೋಟೆ ಜಿಲ್ಲಾ ಪಂಚಾಯ್ತ್ ಅಸಿಸ್ಟೆಂಟ್ ಸೆಕ್ರೆಟರಿ ಶ್ಯಾಂ ಸುಂದರ್ ಕಾಂಬ್ಳ, ವಿಜಯಪುರ ಜಿಲ್ಲೆ ಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ, ಕಾರವಾರ ಜಿಲ್ಲೆ ಸಿದ್ದಾಪುರ ಕೋಲಾ ಶಿರಸಿ ಗ್ರಾಮ ಸೇವಾ ಸಹಕಾರಿ ಸಂಘದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಾರುತಿ ಯಶವಂತ ಮಾಳವಿ, ರಾಯಚೂರು ಜಿಲ್ಲೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸಹಾಯಕ ಎಂಜಿನಿಯರ್ ವಿಜಯಲಕ್ಷ್ಮಿ ನಿವಾಸದ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.
ಬಾಗಲಕೋಟೆಯಲ್ಲಿ ದಾಳಿ!
ಬಾಗಲಕೋಟೆ ಜಿಲ್ಲಾ ಪಂಚಾಯತ್ನ ಅಸಿಸ್ಟೆಂಟ್ ಸೆಕ್ರೆಟರಿ ಶ್ಯಾಂ ಸುಂದರ್ ಕಾಂಬ್ಳೆ ಅವರ ಮನೆ ಮತ್ತು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಆರೋಪದಡಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ವಿಜಯಪುರದಲ್ಲಿ ದಾಳಿ!
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ನಿವಾಸದ ಮೇಲೆ ಕೂಡ ದಾಳಿ ನಡೆದಿದೆ. ವಿಜಯಪುರ ನಗರದ ಜಲನಗರದಲ್ಲಿರುವ ಅವರ ಮನೆ, ಬಸವನ ಬಾಗೇವಾಡಿ ತೋಟದ ಮನೆ, ಕಚೇರಿ ಮತ್ತು ಮಾವನ ಮನೆ ಸೇರಿ ನಾಲ್ಕು ಕಡೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ. ಲೋಕಾಯುಕ್ತರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಳಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ಮತ್ತು ಶಿರಸಿ ಪ್ರದೇಶದಲ್ಲಿ ನಾಲ್ಕು ಕಡೆ ದಾಳಿ ನಡೆದಿದೆ. ಸಿದ್ದಾಪುರ ಕೋಲಾ ಶಿರಸಿ ಗ್ರಾಮ ಸೇವಾ ಸಹಕಾರಿ ಸಂಘದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಾರುತಿ ಯಶವಂತ ಮಾಳವಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಹಳಿಯಾಳದಲ್ಲಿ ಎರಡು ಕಡೆ, ಸಿದ್ದಾಪುರದಲ್ಲಿ ಎರಡು ಕಡೆ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಪಿ.ಐ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಉಡುಪಿ, ಮಂಗಳೂರು ಮತ್ತು ಕಾರವಾರದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ದಾಳಿ!
ರಾಯಚೂರು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸಹಾಯಕ ಎಂಜಿನಿಯರ್ ವಿಜಯಲಕ್ಷ್ಮಿ ಅವರ ಮನೆ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಬ್ಬಿ ನೇತೃತ್ವದಲ್ಲಿ ಐದು ತಂಡಗಳು ಕಾರ್ಯಾಚರಣೆ ನಡೆಸಿವೆ. ನಗರದ ಐಡಿಎಸ್ಎಂಟಿ ಲೇಔಟ್ನಲ್ಲಿ ಎರಡು ಮನೆ, ಗಂಗಾಪರಮೇಶ್ ಲೇಔಟ್ನಲ್ಲಿ ಒಂದು ಮನೆ, ಜೋಳದ ಹೆಡಗಿಯಲ್ಲಿ ವಿಜಯಲಕ್ಷ್ಮಿ ಅವರ ತಂಗಿಯ ಮನೆ ಸೇರಿ ದಾಳಿ ನಡೆದಿದೆ. ಈಗಾಗಲೇ 49 ಆಸ್ತಿ ಖರೀದಿ ದಾಖಲೆಗಳು (ಡೀಡ್ಸ್), ಒಂದು ಇನ್ನೋವಾ ಕಾರು ಮತ್ತು ಒಂದು ಫೋರ್ಡ್ ಕಾರು ಪತ್ತೆಯಾಗಿವೆ. ಇನ್ನುಳಿದ ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲೋಕಾ ಬಲೆಗೆ!
ಇದಲ್ಲದೆ, ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೇಸ್ ಒಂದರ ವಿಚಾರವಾಗಿ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ನಿನ್ನೆ ರಾತ್ರಿ ಟ್ರ್ಯಾಪ್ ಮಾಡಿ ಬಂಧಿಸಲಾಗಿದೆ. ಲೋಕಾಯುಕ್ತರು ಹಣ ಪಡೆಯುವಾಗಲೇ ಶಿವಣ್ಣ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಈ ದಾಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮತ್ತು ಲಂಚ ಪ್ರಕರಣಗಳ ಹಿನ್ನೆಲೆಯಲ್ಲಿ ನಡೆದಿವೆ. ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರ ಕಠಿಣ ಕ್ರಮ ರಾಜ್ಯದಲ್ಲಿ ಮುಂದುವರಿದಿದ್ದು, ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು; ಒಂದೇ ಸಮಯಕ್ಕೆ ನಾಲ್ಕು ಜಿಲ್ಲೆಗಳಲ್ಲಿ ಬೇಟೆ
