ಬೆಂಗಳೂರು: ಬೆಂಗಳೂರಿನ ಕೋಗಿಲು ಬಡಾವಣೆ ಬಳಿ ಮನೆಗಳ ತೆರವು ಸಂತ್ರಸ್ತರಿಗೆ ಈಗಾಗಲೇ ನೀಡಿದ ಭರವಸೆಯಂತೆ ಸರ್ಕಾರ ಇಂದು ಮನೆಗಳ ಹಸ್ತಾಂತರ ಮಾಡಬೇಕಿದೆ. ಆದರೆ ಇವತ್ತೇ ನಿರಾಶ್ರಿತರಿಗೆ ಮನೆ ಸಿಗುವುದು ಅನುಮಾನ. ಅಧಿಕಾರಿಗಳು ನಿಯಮ ಪಾಲನೆಯ ಗೊಂದಲಕ್ಕೆ ಸಿಲುಕಿದ್ದಾರೆ ಎಂಬ ಖಚಿತ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. ಒಂದೆಡೆ ನಿಯಮಗಳ ಪಾಲನೆ ಮಾಡಬೇಕು, ಮತ್ತೊಂದೆಡೆ ರಾಜಕಾರಣಿಗಳ ಒತ್ತಡವೂ ಇದೆ. ಇವೆರಡರ ನಡುವೆ ಅಧಿಕಾರಿಗಳು ಸಿಲುಕಿಕೊಂಡಿದ್ದಾರೆ. ಪರ್ಯಾಯ ಮನೆ ನೀಡುವ ಪ್ರಕ್ರಿಯೆ ಸುಲಭವಾಗಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳ ತೆರವುಗೊಳಿಸಿದ ಸಂದರ್ಭದಲ್ಲಿ ಇದುವರೆಗೆ ಯಾವುದೇ ಪರ್ಯಾಯ ಮನೆಗಳನ್ನು ಕೊಟ್ಟಿಲ್ಲ. ಹಾಗಾಗಿ ಈಗ ಹೇಗೆ ಕೊಡುವುದು ಎಂಬ ಪ್ರಶ್ನೆ ಉದ್ಭವಿಸಿದೆ.
ಮಾನವೀಯ ನೆಪದಲ್ಲಿ ಮನೆ ನೀಡಲು ಮುಂದಾದರೆ, ಲಕ್ಷಾಂತರ ಕುಟುಂಬಗಳು ಇದೇ ರೀತಿ ಬೀದಿಯಲ್ಲಿ ಇವೆಯಲ್ಲವೇ ಎಂಬ ಪ್ರಶ್ನೆ ಎದುರಾಗಲಿದೆ. ಬಾಂಗ್ಲಾ ಸೇರಿದಂತೆ ಬೇರೆ ಬೇರೆ ರಾಜ್ಯಗಳು ಹಾಗೂ ದೇಶಗಳಿಂದ ಬಂದ ಕಾರ್ಮಿಕರೂ ಕೂಡ ಮನೆಗಾಗಿ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದ ಆಶ್ರಯ ಯೋಜನೆ ಅಡಿ ಮನೆ ನೀಡಲು ನಿಗದಿತ ನಿಯಮಗಳ ಪಾಲನೆ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಫಲಾನುಭವಿ ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- 18 ವರ್ಷ ಮೇಲ್ಪಟ್ಟರಬೇಕು.
- ಆಧಾರ್ ಕಾರ್ಡ್, ನಿವಾಸ ಮತ್ತು ಗುರುತಿನ ಪುರಾವೆ ಹೊಂದಿರಬೇಕು.
- ಕಂದಾಯ ಇಲಾಖೆಯಿಂದ ಆದಾಯ ಪ್ರಮಾಣಪತ್ರ ಪಡೆದಿರಬೇಕು. 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರಬೇಕು.
- ವಾಸಸ್ಥಳ ದೃಢೀಕರಣಕ್ಕೆ ರೇಷನ್ ಕಾರ್ಡ್ ಅಥವಾ ಮತದಾರ ಚೀಟಿ ಹೊಂದಿರಬೇಕು.
- 2-3 ಪಾಸ್ಪೋರ್ಟ್ ಸೈಜ್ ಫೋಟೋ, ಕಟ್ಟಡ ಕಾರ್ಮಿಕರ ನೋಂದಣಿ ಇತ್ಯಾದಿ ದಾಖಲೆಗಳು ಇರಲೇಬೇಕು.
ದುಡ್ಡು ಕಟ್ಟಿರುವ ನಮಗೆ ಮೊದಲು ಮನೆ ಕೊಡಿ: ಫಲಾನುಭವಿಗಳ ಪ್ರತಿಭಟನೆ
ಒಂದೆಡೆ ಕೋಗಿಲು ನಿರಾಶ್ರಿತರಿಗೆ ಮನೆ ಕೊಡಲು ಸರ್ಕಾರ ಮುಂದಾಗಿದ್ದರೆ, ಇನ್ನೊಂದೆಡೆ, ಅಸಲಿ ಫಲಾನುಭವಿಗಳು ಸಿಡಿದೆದ್ದಿದ್ದಾರೆ. ನಾವು ದುಡ್ಡು ಕೊಟ್ಟಿದ್ದೇವೆ. ನಮಗೆ ಮೊದಲು ಮನೆ ಕೊಡಿ, ಇಲ್ಲವಾದ್ರೆ ವಿಷ ಕೊಟ್ಬುಬಿಡಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಕೋಗಿಲು ನಿರಾಶ್ರಿತರಿಗೆ ಮನೆ ನೀಡುವ ಸರ್ಕಾರದ ನಡೆ ಅಸಲಿ ಫಲಾನುಭವಿಗಳನ್ನು ಕೆರಳಿಸಿದೆ. ನಾವು 7 ವರ್ಷದಿಂದ ದುಡ್ಡು ಕಟ್ಟಿದ್ದೇವೆ. ನಾವು ಕಟ್ಟಿದ ದುಡ್ಡಲ್ಲಿ ಅಪಾರ್ಟ್ಮೆಂಟ್ ಕಟ್ಟಿ ಕನ್ನಡಿಗರಲ್ಲದವರಿಗೆ ಮನೆ ಕೊಡುತ್ತಿದ್ದೀರಾ? ದುಡ್ಡು ಕಟ್ಟಿರುವ ನಮಗೆ ಮೊದಲು ಮನೆ ಕೊಡಿ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಎಂಡಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಪ್ರತಿಕ್ರಿಯಿಸಿದ್ದು, ಜಿಬಿಎಯಿಂದ ಫಲಾನುಭವಿಗಳ ಪಟ್ಟಿ ಬರುವ ವರೆಗೂ ಮನೆ ಕೊಡಲು ಆಗಲ್ಲ ಎಂದಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್, ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ.
ದಾವಣಗೆರೆ ನಿರಾಶ್ರಿತರಿಗೆ ಕಾಳಜಿ ಕೇಂದ್ರದಿಂದಲೂ ಗೇಟ್ಪಾಸ್!
ಕೋಗಿಲು ನಿರಾಶ್ರಿತರಿಗೆ ಮನೆ ನೀಡಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಆದರೆ, ದಾವಣಗೆರೆಯ ರವೀಂದ್ರನಾಥ ಬಡಾವಣೆಯ 36 ಕುಟುಂಬ ಕತ್ತಲಿಗೆ ಬಿದ್ದಿವೆ. ಕಳೆದ ಅಕ್ಟೋಬರ್ನಲ್ಲಿ ಅಕ್ರಮ ಮನೆ ತೆರವು ಮಾಡಿದ್ದ ಸರ್ಕಾರ, ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿತ್ತು. ಆದರೆ ಈಗ 10 ಜರನ್ನು ಕಾಳಜಿ ಕೇಂದ್ರದಿಂದಲೂ ಹೊರದಬ್ಬಲಾಗಿದೆ. ಕಳೆದ 15 ದಿನದಿಂದ ಒಪ್ಪೊತ್ತಿನ ಊಟಕ್ಕೂ ಇವರು ಪರದಾಡುತ್ತಿದ್ದಾರೆ. ಬೆಂಗಳೂರಿನ ಕೋಗಿಲು ನಿವಾಸಿಗಳಿಗೆ ಒಂದು ನ್ಯಾಯ, ನಮಗೊಂದು ನ್ಯಾಯವೇ ಎಂದು ನಿರಾಶ್ರಿತರು ಆಕ್ರೋಶ ಹೊರಹಾಕಿದ್ದಾರೆ.
