ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಏಕವಚನ ಬಳಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ರಾಜೀವ್ ಗೌಡ ಅಷ್ಟೇ ಅಲ್ಲ ಜೊತೆಗೆ ಮತ್ತೊಬ್ಬ ಆರೋಪಿಯನ್ನ ಕೂಡ ಪೊಲೀಸರು ಬಂಧಿಸಿದ್ದಾರೆ. ಯಾರು ಈತ?
ಮಂಗಳೂರಿನ ಉದ್ಯಮಿ ಅರೆಸ್ಟ್
ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಮೈಕಲ್ ಎಂಬಾತನನ್ನ ಕೂಡ ಅರೆಸ್ಟ್ ಮಾಡಲಾಗಿದೆ. ಮೈಕಲ್ ಮಂಗಳೂರು ಮೂಲದ ಉದ್ಯಮಿಯಾಗಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸರು ಕೇರಳ ಗಡಿಯಿಂದ ಕರೆತಂದಿದ್ದಾರೆ. ತಡರಾತ್ರಿ ಇಬ್ಬರನ್ನು ಪೊಲೀಸರು ಚಿಕ್ಕಬಳ್ಳಾಪುರಕ್ಕೆ ಕರೆತಂದಿದ್ದಾರೆ. ಇಂದು ಇಬ್ಬರನ್ನು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ.
ಕೋರ್ಟ್ಗೆ ಇಬ್ಬರು ಹಾಜರು
ಶಿಡ್ಲಘಟ್ಟ ಕೋರ್ಟ್ಗೆ ಆರೋಪಿಯನ್ನ ಹಾಜರುಪಡಿಸಲಿರುವ ಪೊಲೀಸರು ರಾಜೀವ್ ಗೌಡ ಅವರನ್ನ ಮಾತ್ರ ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ. ಮತ್ತೊಬ್ಬ ಆರೋಪಿ ಮೈಕಲ್ ಅವರನ್ನ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ. ಆರೋಪಿಗೆ ಆಶ್ರಯ ಕೊಟ್ಟ ಆರೋಪದಲ್ಲಿ ಮೈಕಲ್ ಅವರನ್ನ ಬಂಧಿಸಿದ್ದು, ಪೊಲೀಸ್ ಕಸ್ಟಡಿಗೆ ಅವಶ್ಯಕತೆ ಇಲ್ಲ ಎಂದು ಪೊಲೀಸರು ಹೇಳಲಿದ್ದಾರೆ.
ಗೆಸ್ಟ್ ಹೌಸ್ನಲ್ಲಿ ರಾಜೀವ್ ಗೌಡ
ಕೇರಳದಿಂದ ಆರೋಪಿ ರಾಜೀವ್ ಗೌಡ ಅವರನ್ನ ಬಂಧಿಸಿ ಕರೆತಂದ ಪೊಲೀಸರು ಚಿಕ್ಕಬಳ್ಳಾಪುರದ ಗೆಸ್ಟ್ ಹೌಸ್ ನಲ್ಲಿ ಇರಿಸಿದ್ದಾರೆ ಎನ್ನಲಾಗ್ತಿದೆ. ತಡರಾತ್ರಿಯೇ ಕೇರಳ ಗಡಿಯಿಂದ ಕರೆ ತಂದಿದ್ದು, ಟ್ರಾವೆಲ್ ಮಾಡಿದ್ದ ಕಾರಣಕ್ಕೆ ಸದ್ಯ ಪೊಲೀಸರು ರೆಸ್ಟ್ಗೆ ಬಿಟ್ಟಿದ್ದಾರೆ. 10 ಗಂಟೆ ಸುಮಾರಿಗೆ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸಲಿದ್ದಾರೆ.
ಏನಿದು ಕೇಸ್?
ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್ಗಳನ್ನು ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರಾಜೀವ್ ಗೌಡ, ಜನವರಿ 12ರಂದು ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ. ಈ ಕುರಿತು ಜನವರಿ 14ರಂದು ಅಧಿಕೃತ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ಆತನನ್ನ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀವ್ ಗೌಡ ಜೊತೆಗೆ ಮತ್ತೋರ್ವನ ಬಂಧನ; ಅರೆಸ್ಟ್ ಬಳಿಕ ಗೆಸ್ಟ್ ಹೌಸ್ಗೆ ಕೈ ಮುಖಂಡ
