ಬೆಂಗಳೂರು: ಹೋಟೆಲ್‌ಗೆ ಹೋದ ತಕ್ಷಣ ಬಿಸಿ ಬಿಸಿ ತಿಂಡಿ ಅಥವಾ ಊಟ ಸಿಗುತ್ತದೆ ಎಂಬ ಕಾಲ ಈಗ ಬದಲಾಗುತ್ತಿದೆ! ಇರಾನ್, ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಎದುರಾಗಿದ್ದು, ಬೆಂಗಳೂರಿನ ಹೋಟೆಲ್‌ಗಳಲ್ಲಿ ಸರ್ವೀಸ್ ಸಮಯವನ್ನು ಹೆಚ್ಚಿಸಲಾಗಿದೆ. ಇನ್ಮುಂದೆ ನೀವು ಆರ್ಡರ್ ಮಾಡಿದ ತಿಂಡಿ ನಿಮ್ಮ ಕೈ ಸೇರಲು ಕನಿಷ್ಠ 15 ರಿಂದ 20 ನಿಮಿಷ ಕಾಯುವುದು ಅನಿವಾರ್ಯವಾಗಲಿದೆ.
ಸಿಲಿಂಡರ್ ಅಭಾವಕ್ಕೆ ಸೌದೆ ಒಲೆ ಪರ್ಯಾಯ
ಕೆಲ ದಿನಗಳ ಹಿಂದಷ್ಟೇ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಊಟದ ದರ ಹೆಚ್ಚಳ ಮಾಡಲಾಗಿತ್ತು. ಈಗ ಬೆಲೆ ಹೆಚ್ಚಳದ ಜೊತೆಗೆ ಸಿಲಿಂಡರ್‌ಗಳ ಲಭ್ಯತೆಯೇ ಇಲ್ಲದಂತಾಗಿದೆ. ಈ ಅಭಾವವನ್ನು ನೀಗಿಸಲು ಹೋಟೆಲ್ ಮಾಲೀಕರು ಸೌದೆ ಒಲೆ ಹಾಗೂ ಎಲೆಕ್ಟ್ರಿಕ್ ಸ್ಟೌವ್‌ಗಳ ಮೊರೆ ಹೋಗುತ್ತಿದ್ದಾರೆ. ಎಲ್‌ಪಿಜಿ ಒಲೆಗಳಿಗೆ ಹೋಲಿಸಿದರೆ ಸೌದೆ ಅಥವಾ ಎಲೆಕ್ಟ್ರಿಕ್ ಸ್ಟೌವ್‌ಗಳಲ್ಲಿ ಅಡುಗೆ ತಯಾರಿಸಲು ಹೆಚ್ಚಿನ ಸಮಯ ತಗಲುತ್ತದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ತಕ್ಷಣಕ್ಕೆ ಊಟ-ತಿಂಡಿ ನೀಡಲು ಹೋಟೆಲ್‌ಗಳು ಹೈರಾಣಾಗುತ್ತಿವೆ.
ಗ್ರಾಹಕರಿಗೆ ತಪ್ಪದ ಸಂಕಷ್ಟ
ತುರ್ತಾಗಿ ಕೆಲಸಕ್ಕೆ ಹೋಗುವವರು ಅಥವಾ ಹಸಿವಿನಿಂದ ಹೋಟೆಲ್‌ಗೆ ಬರುವವರು ಈಗ ಅನಿವಾರ್ಯವಾಗಿ ವೈಟಿಂಗ್ ರೂಮ್‌ನಲ್ಲಿ ಕಾಯಬೇಕಿದೆ. ಗಲ್ಫ್ ರಾಷ್ಟ್ರಗಳ ಯುದ್ಧ ತಂದೊಡ್ಡಿರುವ ಈ ಅನಿಶ್ಚಿತತೆ ಹೋಟೆಲ್ ಉದ್ಯಮವನ್ನೇ ಅಸ್ತವ್ಯಸ್ತಗೊಳಿಸಿದೆ. ‘ಹೆಚ್ಚು ಹಣ ಕೊಟ್ಟರೂ ಊಟಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ಯುದ್ಧದ ಪರಿಣಾಮ ಸಾಮಾನ್ಯ ಜನರ ತಟ್ಟೆಯವರೆಗೂ ತಲುಪಿದೆ.
