Ad image

ಕಾಂಗ್ರೆಸ್‌ನಲ್ಲಿ ದಾವಣಗೆರೆ ಉಪಕದನ ಕಿಚ್ಚು: ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಆಪ್ತರಿಂದಲೂ ಸಾಮೂಹಿಕ ರಾಜೀನಾಮೆ!

Team SanjeMugilu
1 Min Read

ದಾವಣಗೆರೆ/ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಈಗ ಕಾಂಗ್ರೆಸ್  ಮನೆಯಲ್ಲಿ ಬೆಂಕಿ ಹೊತ್ತಿಸಿದೆ. ಅಲ್ಪಸಂಖ್ಯಾತ ನಾಯಕರ ನಡುವಿನ ಗುದ್ದಾಟ ಬೀದಿಗೆ ಬಂದಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ನೀಡಿದ್ದ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಘಟಕದ 10ಕ್ಕೂ ಹೆಚ್ಚು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪ್ರತಿಭಟಿಸಿದ್ದಾರೆ.

ರಾಜೀನಾಮೆ ಪರ್ವ ಮತ್ತು ಆಕ್ರೋಶ
ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಮಸ್ಯೆಯನ್ನು ಈ ಹಂತಕ್ಕೆ ತಲುಪಲು ಬಿಟ್ಟಿದ್ದೇಕೆ?’ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್ ಅವರು ಸಂಪೂರ್ಣ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜನೆ ಮಾಡಿದ್ದು, ಶೀಘ್ರದಲ್ಲೇ ಹೊಸ ಘಟಕ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.

ಶಾಸಕ ರಿಜ್ವಾನ್ ಅರ್ಷದ್ ಸ್ಫೋಟಕ ಹೇಳಿಕೆ
ಸಚಿವ ಜಮೀರ್ ಅಹ್ಮದ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾಸಕ ರಿಜ್ವಾನ್ ಅರ್ಷದ್, ‘ಸಿಎಂ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಬ್ಬ ಹಿರಿಯ ನಾಯಕರು, ಟಿಕೆಟ್ ಕೊಟ್ಟರೆ ಜಬ್ಬಾರ್ ಅವರಿಗೆ ಕೊಡಿ ಇಲ್ಲದಿದ್ದರೆ ಯಾರಿಗಾದರೂ ಕೊಡಿ ಎಂದು ಹೇಳಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿಯಿದೆ,’ ಎಂದು ತಿವಿದಿದ್ದಾರೆ. ವ್ಯಕ್ತಿ ಪರವಾಗಿ ಟಿಕೆಟ್ ಕೇಳಿದ್ದರಿಂದಲೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ಎಸ್‌ಡಿಪಿಐ ತಿರುಗೇಟು
ಇದೇ ವೇಳೆ, ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಪೇಟೆ ತಿರುಗೇಟು ನೀಡಿದ್ದಾರೆ. ‘ನಮಗೆ ಯಾರೂ ಫಂಡಿಂಗ್ ಮಾಡಿಲ್ಲ. ಕಾಂಗ್ರೆಸ್ ತನ್ನ ಆಂತರಿಕ ಕಿತ್ತಾಟವನ್ನು ಮುಚ್ಚಿ ಹಾಕಲು ಇಂತಹ ಆರೋಪಗಳನ್ನು ಮಾಡುತ್ತಿದೆ,’ ಎಂದು ಅವರು ಹೇಳಿದ್ದಾರೆ.

Share This Article