ಬೆಂಗಳೂರು: ಮುಸ್ಲಿಂ ನಾಯಕರ ವಿರುದ್ದದ ಕ್ರಮದಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಮೇಲೆ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತ ನಾಯಕರನ್ನು ಸಮಾಧಾನಪಡಿಸುವ ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ನಾಯಕರ ವಿರುದ್ಧದ ಕ್ರಮಗಳಲ್ಲಿ ಅಥವಾ ನಡೆಗಳಲ್ಲಿ ಏನಾದರೂ ತಪ್ಪಾಗಿದ್ದರೆ, ಅದನ್ನು ಕುಳಿತು ಮಾತನಾಡಿ ಸರಿಪಡಿಸಿಕೊಳ್ಳೋಣ. ವ್ಯವಸ್ಥೆಯಲ್ಲಿ ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಲೋಪಗಳು ಸಹಜ, ಅದನ್ನು ತಿದ್ದಿಕೊಂಡು ಮುಂದೆ ಹೋಗಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ದೇಶದ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಈ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದೊಳಗೆ ಅಸಮಾಧಾನ ಮೂಡಿದಾಗ ಕೆಲವರು ಅದನ್ನು ಬಳಸಿಕೊಂಡು ವಿಷಯವನ್ನು ಮತ್ತಷ್ಟು ಕೆಡಿಸಲು ಪ್ರಯತ್ನಿಸುತ್ತಾರೆ. ಬೆಂಕಿಗೆ ತುಪ್ಪ ಸುರಿಯುವವರ ಬಗ್ಗೆ ನಾವು ಎಚ್ಚರದಿಂದಿರಬೇಕು ಎಂದು ಎಚ್ಚರಿಸಿದರು.
ಅಲ್ಪಸಂಖ್ಯಾತ ಸಮುದಾಯದ ನಾಯಕರು ಟಿಕೆಟ್ ಹಂಚಿಕೆ ಅಥವಾ ಇತರ ವಿಚಾರಗಳಿಗಾಗಿ ಬೇರೆ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಅತೃಪ್ತ ನಾಯಕರೊಂದಿಗೆ ನೇರವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ನಾಯಕರು ‘ತಲಾಕ್’ ನೀಡುತ್ತಾರೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತ ನಾಯಕರೊಂದಿಗೆ ಮಾತನಾಡಲು ನಮ್ಮ ನಾಯಕರು ನಿರ್ಧರಿಸಿದ್ದಾರೆ. ಅವರ ಮನವೊಲಿಸುವ ಕಾರ್ಯ ನಡೆಯಲಿದೆ, ಯಾವುದೇ ಆತಂಕ ಬೇಡ ಎಂದರು.
