Ad image

ನವೆಂಬರ್ ಆರಂಭದಲ್ಲೇ ಸಿಡಿದ ಡೆಡ್‌ಲೈನ್ ಬಾಂಬ್:

Team SanjeMugilu
1 Min Read

ಬೆಂಗಳೂರು: ಕಾಂಗ್ರೆಸ್  ಕೋಟೆಯ ಕುರ್ಚಿ ಕಂಪಿಸುತ್ತಿದೆ. ಅಕ್ಟೋಬರ್ ಮುಗಿದು ನವೆಂಬರ್ ಆರಂಭವಾಗಿದೆ. ಇಂದು ರಾಜ್ಯೋತ್ಸವದ ಸಂಭ್ರಮ ಬೇರೆ. ನವೆಂಬರ್​ನಲ್ಲಿಯೇ, ಕರ್ನಾಟಕ ಕಾಂಗ್ರೆಸ್​ ಪಾಳೆಯದಲ್ಲಿ ಕ್ರಾಂತಿಯಾಗುತ್ತದೆಯಾ ಎಂಬ ಕುತೂಹಲ ಗರಿಗೆದರಿದೆ. ಇಂಥಾ ಹೊತ್ತಲ್ಲೇ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ಸಿಎಂ ಆಗಿ ಪದಗ್ರಹಣ ಮಾಡೋದಕ್ಕೆ ಡಿಕೆ ಡೆಡ್​ಲೈನ್ ಕೊಟ್ಟಿದ್ದಾರೆಂಬ ಊಹಾಪೋಹ ಹರಿದಾಡುತ್ತಿದೆ. ಹೀಗೊಂದು ವದಂತಿ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

‘‘ನಿನಗೆ ಹೇಗೆ ಗೊತ್ತು?’’ ಎಂದು ಸಿದ್ದರಾಮಯ್ಯ ಪತ್ರಕರ್ತರನ್ನು ಗದರಿದ್ದಾರೆ. ಪತ್ರಿಕೆ ವಿಚಾರ ಹೇಳಿದಾಗ ಯಾವ ಪೇಪರ್‌ನಲ್ಲಿ? ನಾನು ಎಲ್ಲ ಪತ್ರಿಕೆಯನ್ನು ಒದುತ್ತೇನೆ. ಎಲ್ಲೂ ನೋಡಿಲ್ಲ ಎಂದಿದ್ದಾರೆ. ಡಿಕೆ ಶಿವಕುಮಾರ್ ಡೆಡ್‌ಲೈನ್ ನೀಡಿದ್ದಾರಂತೆ ಎಂಬ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪ್ಪ, ಅದು ದೊಡ್ಡವರ ವಿಷ್ಯ. ನಮಗೆ ಹೇಗೆ ಗೊತ್ತಾಗುತ್ತೆ ಎಂದರು.

ಈ ನಡುವೆ ಸಚಿವ ಜಮೀರ್ ಅಹ್ಮದ್, ಡಿಕೆ ಶಿವಕುಮಾರ್​​ಗೆ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ, ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ 5ವರ್ಷ ಸಿಎಂ ಎಂದು ಹೇಳಿದ್ದಾರೆ. ಸಚಿವರೆಲ್ಲರೂ ಯಾವುದೇ ಕ್ರಾಂತಿ ಇಲ್ಲ ಎಂದಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆ ಹೊತ್ತಿನಲ್ಲೇ ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ ಘೋಷಣೆಗಳು ಮೊಳಗುತ್ತಿವೆ. ಇದೀಗ ಚಿತ್ರದುರ್ಗದಲ್ಲಿ ಮುಂದಿನ ಡಿಸಿಎಂ ಜಮೀರ್ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಭಿತ್ತಿಪತ್ರ ಪ್ರದರ್ಶಿಸಿದ್ದಾರೆ.

ಮೇಲ್ನೋಟಕ್ಕೆ ಕಾಂಗ್ರೆಸ್​​ನಲ್ಲಿ ಏನಾಗುತ್ತಿಲ್ಲ ಎಂಬಂತೆ ಬಿಂಬಿಸಲು ಯತ್ನಿಸಿದರೂ, ಒಳಗೊಳಗೆ ನಡೆಯುತ್ತಿರುವ ಬೆಳವಣಿಗೆ, ನಾಯಕರ ಬಾಯಿಂದ ಹೊರ ಬರುತ್ತಿರುವ ಮಾತುಗಳು, ಚರ್ಚೆಗೀಡು ಮಾಡಿವೆ. ಈ ನಡುವೆ ಇಂದಿನಿಂದ ನವೆಂಬರ್ ಬೇರೆ ಶುರುವಾಗಿದೆ. ಕ್ರಾಂತಿನಾ? ಇಲ್ಲ ಬರೀ ಭ್ರಾಂತಿನಾ ಕಾದು ನೋಡಬೇಕಿದೆ.

Share This Article