Ad image

ಕನ್ನಡ ರಾಜ್ಯೋತ್ಸವದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಸಿಎಂ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

Team SanjeMugilu
2 Min Read

ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಡಿದ ಭಾಷಣವು ಕನ್ನಡ ನಾಡು-ನುಡಿಯ ಗೌರವ, ಏಕೀಕರಣ ಹೋರಾಟ ಮತ್ತು ಭಾಷಾ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನೆಯನ್ನು ಒಳಗೊಂಡಿತ್ತು.
ಸಿಎಂ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾಡಿದ ಈ ಭಾಷಣವು ರಾಜ್ಯದ ಜನತೆಗೆ ಸ್ಫೂರ್ತಿ ನೀಡುವಂತಿದ್ದರೆ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀಕ್ಷ್ಣ ಟೀಕೆಯನ್ನೂ ಒಳಗೊಂಡಿತ್ತು.
ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆದ ಸಿಎಂ!
ಕನ್ನಡ ರಾಜ್ಯ 69 ವರ್ಷಗಳನ್ನು ಪೂರೈಸಿ, 70ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಒತ್ತಿ ಹೇಳಿದರು. ಕನ್ನಡ ನಾಡು-ನುಡಿಗೆ ಕೊಡುಗೆ ನೀಡಿದವರನ್ನು ಸ್ಮರಿಸುವ ಮೂಲಕ ರಾಜ್ಯದ ಇತಿಹಾಸವನ್ನು ಗೌರವಿಸಬೇಕು ಎಂಬುದು ಅವರ ಸಂದೇಶವಾಗಿತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು.
ಹಿಂದಿ ಹೇರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕಿಡಿ!
ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷಾ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದರು. ಹೀಗಾಗಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂಬ ಬೇಡಿಕೆ ಇಟ್ಟರು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಹಿಂದಿ ಭಾಷೆಯನ್ನು ಹೇರಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿ, ಹಿಂದಿ ಅಭಿವೃದ್ಧಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿದರು. ಇದು ಕರ್ನಾಟಕ ವಿರೋಧಿ ನೀತಿ ಎಂದು ಕರೆಯಬೇಕಾದ್ದು, ಎಲ್ಲರೂ ಇದನ್ನು ಖಂಡಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ!
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ಅಭಿವೃದ್ಧಿಗೆ ಬೇಕಾದ ಯೋಜನೆಗಳು ಕೇಂದ್ರದಿಂದ ಸಿಗುತ್ತಿಲ್ಲ ಎಂದು ದೂರಿದರು. ಆದರೆ ನಮ್ಮ ಸರ್ಕಾರ ಜನರಲ್ಲಿ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡರು. ಉದಾಹರಣೆಗೆ, ವಿಧಾನಸೌಧದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ವಾಣಿಜ್ಯ ಮಳಿಗೆಗಳಲ್ಲಿ ನಾಮಫಲಕಗಳಲ್ಲಿ 60 ಪ್ರತಿಶತ ಕನ್ನಡವನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ನೆನೆದು ಅವರಿಗೆ ಅಭಿನಂದನೆ ಸಲ್ಲಿಸಿದರು. ಕನ್ನಡ ಸಾಹಿತ್ಯದ ಹೆಮ್ಮೆಯಾಗಿರುವ ಭಾನು ಅವರ ಸಾಧನೆಯು ರಾಜ್ಯಕ್ಕೆ ಗರ್ವ ತಂದಿದೆ ಎಂದು ಹೇಳಿದರು. ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರ ಭಾಷಣವು ಕನ್ನಡದ ಗೌರವವನ್ನು ಕಾಪಾಡುವ, ಭಾಷಾ ನೀತಿಯಲ್ಲಿ ಸಮಾನತೆ ಬೇಡುವ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಹೋರಾಡುವ ಸಂದೇಶವನ್ನು ಒಳಗೊಂಡಿತ್ತು. ಈ ರಾಜ್ಯೋತ್ಸವವು ಕನ್ನಡಿಗರಲ್ಲಿ ಒಗ್ಗಟ್ಟನ್ನು ಬೆಳೆಸಲಿ ಎಂಬುದು ಅವರ ಆಶಯವಾಗಿತ್ತು.

Share This Article