ತುಮಕೂರು: 3 ಕೋಟಿ ಮೌಲ್ಯದ ಜಾಗದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ.
ಮಧುವನ್ (25) ಕೊಲೆಯಾದ ಯುವಕ. ನಿನ್ನ ತೋಟದಲ್ಲಿ ನಡೆದ ಗಲಾಟೆ ವೇಳೆ ಉದ್ಯಮಿ ಮಹೇಶ್ ಹಾಗೂ ಶಫಿವುಲ್ಲಾ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಮತ್ತು ಶಫಿವುಲ್ಲಾನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನೆತ್ತರು ಹರಿದಿದ್ದೇಕೆ?
ಕೊಲೆಯಾದ ಮಧುವನ್ ಅವರ ತಂದೆ ನಾರಾಯಣಸ್ವಾಮಿ 2015ರಲ್ಲಿ ತುಮಕೂರಿನ ಅಮಾನಿಕೆರೆ ಬಳಿಯ 3 ಕೋಟಿ ರೂ. ಮೌಲ್ಯದ 2.2 ಎಕರೆ ಜಮೀನು ಮಾರಾಟಕ್ಕೆ ಚಿಂತನೆ ನಡೆಸಿದ್ದರು. ನಾರಾಯಣಸ್ವಾಮಿ ಅವರಿಗೆ ಆ ಜಮೀನು ತಮ್ಮ ತಾಯಿಯಿಂದ ಬಂದಿದ್ದು, ಇದನ್ನು ಉದ್ಯಮಿ ಮಹೇಶ್ಗೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಜಮೀನಿನ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಅದನ್ನು ಸರಿಪಡಿಸಲು 3 ವರ್ಷಗಳ ಕಾಲ ಸಮಯ ತೆಗೆದುಕೊಂಡಿದ್ದರು.
2018ರಲ್ಲಿ ಸಮಸ್ಯೆ ಬಗೆಹರಿದ ಬಳಿಕ ಈ ವಿಚಾರಕ್ಕೆ ಮಗ ಮಧುವನ್ ಎಂಟ್ರಿಯಾಗಿತ್ತು. ಜಮೀನು ಮಾರಾಟ ಮಾಡಲು ಅವರು ಒಪ್ಪದ ಕಾರಣ ಕಳೆದ 7 ವರ್ಷಗಳಿಂದ ಜಮೀನು ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಅದೇ ರೀತಿ ನಿನ್ನೆ ಕೂಡ ಮಹೇಶ್, ಮಧುವನ್‌ನ ಮಾತನಾಡಿಸಲು ಬಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ತೋಟದಲ್ಲೇ ಇದ್ದ ಮಚ್ಚಿನಿಂದ ಮಹೇಶ್ ಕೊಚ್ಚಿ ಕೊಲೆ ಮಾಡಿದ್ದಾನೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
