ಬಳ್ಳಾರಿ: ಬೇಲಿನೇ ಎದ್ದು ಹೊಲ ಮೇಯೋದು ಅಂತಾರಲ್ಲ ಇದಕ್ಕೇ ನೋಡಿ.. ಅನ್ನ ಹಾಕಿದ ಮನೆಗೆ (ಕನ್ನ ಹಾಕೋ ಇಂತವ್ರಿಂದಲೇ ನಂಬಿಕೆ ಅನ್ನೋ ಪದಕ್ಕೆ ಕಳಂಕ ಬಂದಿರೋದು. ಬ್ಯಾಂಕ್‌ವೊಂದರಲ್ಲಿ (Bank) ಕೆಲಸ ಮಾಡ್ತಿದ್ದ ಸಿಬ್ಬಂದಿಯೊಬ್ಬ, ಅದೇ ಬ್ಯಾಂಕ್‌ಗೆ ಉಂಡೆ ನಾಮ ಉಜ್ಜಿದ್ದಾನೆ. ಕೋಟಿ ಕೋಟಿ ವಂಚಿಸಿ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ ಎಂದು ವರದಿಯಾಗಿದೆ.
ಬಳ್ಳಾರಿ ಶಾಖೆಯ ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿದ್ದ. ನಿಯತ್ತಾಗಿ ಕೆಲಸ ಮಾಡ್ಕೊಂಡು ಇದ್ದಿದ್ದರೆ ಇವತ್ತು ಇಂತಾ ಸುದ್ದಿಯಾಗ್ತಿರಲಿಲ್ಲ. ಕಾಸಿನ ಮೋಹಕ್ಕೆ ಬಿದ್ದವ ಮಾಡಬಾರದ ಕೆಲಸ ಮಾಡಿದ್ದಾನಂತೆ. ಒಂದಿಷ್ಟು ನಕಲಿ ನಂಬರ್ ಬಳಸಿಕೊಂಡು ತನ್ನ ತಂದೆ, ತಾಯಿ, ಹೆಂಡ್ತಿ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದಾನಂತೆ. ನಂತರ ನಕಲಿ ಸಹಿ ಮಾಡಿ ಓಡಿ ಲೋನ್ ಮೂಲಕ 2023ರಿಂದ ಇಲ್ಲಿಯವರಗೆ ಹಂತ ಹಂತವಾಗಿ ಆರು ಖಾತೆಗಳಿಂದ 7.5 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಬ್ಯಾಂಕ್ ಅಡಿಟ್ ವೇಳೆ ಈತನ ಕಳ್ಳಾಟ ಬಟಾಬಯಲಾಗಿದೆ.
ಈ ಬಗ್ಗೆ ಮಾತನಾಡಿದ ಮಾನ್ವಿ ಸಹಕಾರ ಬ್ಯಾಂಕ್ ಎಂಡಿ ರಾಮಕೃಷ್ಣ, ಅಡಿಟ್ ರಿಪೋಟರ್ ನಲ್ಲಿ ವಂಚನೆ ಆಗಿರೋದು ಕಂಡು ಬಂದಿದೆ. ಕೋಟಿಗಟ್ಟಲೇ ದುಡ್ಡು ಹೋಗಿದೆ. ಯಾರು ಸಾಲ ತೆಗೆದುಕೊಂಡು ಮರುಪಾವತಿ ಮಾಡಿ ಕ್ಲೋಸ್ ಮಾಡಿಕೊಂಡಿರುತ್ತಾರೆ, ಅಂತಹ ಲೋನ್ ಗಳನ್ನು ಮತ್ತೆ ತನ್ನ ಫೋನ್ ನಂಬರ್ ಮೂಲಕ ಆ್ಯಕ್ಟೀವ್ ಮಾಡಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.ಈತ ಅಂತಿಂತಾ ಕಿಲಾಡಿ ಅಲ್ಲ. ತನ್ನ ಹೆತ್ತವ್ರಷ್ಟೇ ಅಲ್ಲ ತನ್ನ ಸಂಬಂಧಿಕರ ಹೆಸ್ರಲ್ಲೂ ಖಾತೆ ಓಪನ್ ಮಾಡಿ ಅವ್ರಿಗೂ ಲಕ್ಷ ಲಕ್ಷ ಹಣ ಹಾಕಿದ್ದಾನೆ. ನಂತ್ರ ಆ ಹಣವನ್ನೆಲ್ಲಾ ಡ್ರಾ ಮಾಡ್ಕೊಂಡಿದ್ದ. ಯಾವಾಗ ಮಹಾ ವಂಚನೆ ಬಯಲಾಯ್ತೋ ಕುಟುಂಬಸ್ಥರ ಜೊತೆ ಊರು ಬಿಟ್ಟಿದ್ದಾನೆ.
ಬಳ್ಳಾರಿ ಎಸ್ಪಿ ಸುಮನ್ ಡಿ ಪನ್ನೇಕರ್ ಮಾತನಾಡಿ, ವ್ಯವಸ್ಥಿತವಾಗಿ ವಂಚನೆ ಮಾಡಿರೋದು ಕಂಡು ಬಂದಿದೆ. ಈ ಬಗ್ಗೆ ನಮಗೆ ದೂರು ಬಂದಿದ್ದು, ಎರಡು ವರ್ಷದಲ್ಲಿ ಸುಮಾರು 7 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಯಾಗಿದೆ. ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಆರೋಪಿಯ ಪತ್ತೆ ಕಾರ್ಯ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಒಟ್ನಲ್ಲಿ ಉಂಡ ಮನೆಗೆ ಕನ್ನ ಹಾಕಿರೋ ಈತ. ಎಫ್‌ಡಿ ಇಟ್ಟವ್ರ ನಿದ್ದೆಗೆಡಿಸಿದ್ದಾನೆ. ಕಂಡೋರ ಕಾಸಲ್ಲಿ ಮಜಾ ಮಾಡ್ತಿದ್ದವ್ನಿಗೆ ತಕ್ಕ ಶಿಕ್ಷೆ ಆಗ್ಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
